ವಿದ್ಯುತ್ ತಂತಿ ಮೇಲೆ ಕುಳಿತಿದ್ದ 2 ಲಕ್ಷ ಬೆಲೆಯ ಸಾಕು ಗಿಳಿ ರಕ್ಷಿಸಲು ಯತ್ನ: ವಿದ್ಯುತ್‌ ಶಾಕ್‌ಗೆ ಯುವಕ ಮೃತ್ಯು

Dec 13, 2025 - 17:43
 0  1.2k
ವಿದ್ಯುತ್ ತಂತಿ ಮೇಲೆ ಕುಳಿತಿದ್ದ 2 ಲಕ್ಷ ಬೆಲೆಯ ಸಾಕು ಗಿಳಿ ರಕ್ಷಿಸಲು ಯತ್ನ: ವಿದ್ಯುತ್‌ ಶಾಕ್‌ಗೆ ಯುವಕ ಮೃತ್ಯು

ಬೆಂಗಳೂರು, ಡಿಸೆಂಬರ್‌ 12: ವಿದ್ಯುತ್‌ ತಂತಿಯ ಮೇಲೆ ಕುಳಿತಿದ್ದ ಸಾಕು ಗಿಳಿಯನ್ನು ರಕ್ಷಿಸಲು ಯತ್ನಿಸಿದ ಯುವಕನೊಬ್ಬ ವಿದ್ಯುತ್‌ ಪ್ರವಹದಿಂದ ಮೃತಪಟ್ಟ ಘಟನೆ ನಗರದ ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ಅರುಣ್‌ ಕುಮಾರ್‌ (32) ಎಂದು ಗುರುತಿಸಲಾಗಿದೆ.

ವೀರಭದ್ರ ನಗರದ ಕೃತಿಕಾ ಅಪಾರ್ಟ್‌ಮೆಂಟ್‌ನಲ್ಲಿ ಲಿಖಿತಾ ಎಂಬವರು 2 ಲಕ್ಷ ರೂಪಾಯಿ ಬೆಲೆಯ ವಿದೇಶಿ ಗಿಳಿಯೊಂದನ್ನು ಸಾಕಿದ್ದರು. ಅಪಾರ್ಟ್‌ಮೆಂಟ್‌ ಆವರಣದಲ್ಲಿರುವ ಹೈಟೆನ್ಷನ್‌ ವಿದ್ಯುತ್‌ ಕಂಬದ ತಂತಿಯ ಮೇಲೆ ಗಿಳಿ ಕುಳಿತಿರುವುದನ್ನು ಗಮನಿಸಿದ ಲಿಖಿತಾರ ಸಂಬಂಧಿ ಅರುಣ್‌ ಕುಮಾರ್‌, ಅದನ್ನು ಓಡಿಸಿ ರಕ್ಷಿಸಲು ಮುಂದಾದರು. ಕಬ್ಬಿಣದ ಪೈಪ್‌ಗೆ ಕಟ್ಟಿಗೆಯನ್ನು ಜೋಡಿಸಿ ಕಾಂಪೌಂಡ್‌ ಮೇಲೆ ನಿಂತು ಪ್ರಯತ್ನಿಸಿದ ವೇಳೆ, ಸುಮಾರು 66 ಸಾವಿರ ಕೆವಿ ವಿದ್ಯುತ್‌ ಪ್ರವಹಿಸಿ ಅವರು ತೀವ್ರ ಶಾಕ್‌ಗೆ ಒಳಗಾದರು. ಪರಿಣಾಮವಾಗಿ ಅವರು ಕಾಂಪೌಂಡ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಾರ್ಟ್‌ಮೆಂಟ್‌ ಆವರಣದೊಳಗೆ ಹೈಟೆನ್ಷನ್‌ ವಿದ್ಯುತ್‌ ತಂತಿಗಳು ಹಾದು ಹೋಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣ ವರದಿ (ಯುಡಿಆರ್‌) ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್‌. ನೇಮಗೌಡ ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 8
Wow Wow 0