ಪೊಲೀಸರ ಕಿರುಕುಳ ಆರೋಪ; ಬೆಂಕಿ ಹಚ್ಚಿಕೊಂಡ ಆಟೋ ಚಾಲಕ

Nov 23, 2025 - 13:38
 0  1.8k
ಪೊಲೀಸರ ಕಿರುಕುಳ ಆರೋಪ; ಬೆಂಕಿ ಹಚ್ಚಿಕೊಂಡ ಆಟೋ ಚಾಲಕ
Photo credit: TV09 (ಫೋಟೋ:ಆತ್ಮಹತ್ಯೆಗೆ ಯತ್ನಿಸಿದ ತಿಪ್ಪೇಸ್ವಾಮಿ)

ಚಿತ್ರದುರ್ಗ, ನ. 23: ಪೊಲೀಸರ ವರ್ತನೆಗೆ ಬೇಸತ್ತ ಆಟೋ ಚಾಲಕನೊಬ್ಬ ನಗರದ ಗಾಂಧಿ ವೃತ್ತದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವ ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ರಕ್ಷಣೆಗೆ ಲಾವಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ (35) ಗಾಂಧಿ ವೃತ್ತದ ಬಳಿ ಆಟೋ ಚಲಾಯಿಸುತ್ತಿದ್ದ ವೇಳೆ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಕುಡಿದು ಚಾಲನೆ ಮಾಡುತ್ತಿದ್ದಾನೆಂದು ಶಂಕಿಸಿದ ಪೊಲೀಸರು ಯೂನಿಫಾರ್ಮ್ ಇಲ್ಲದಿರುವುದನ್ನು ಕಂಡು ಕಾಲರ್ ಪಟ್ಟಿ ಹಿಡಿದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯ ಮೊಬೈಲ್‌ನಲ್ಲಿ ದಾಖಲಾಗಿದ್ದು, ಇದರಿಂದ ಮನನೊಂದ ಚಾಲಕ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.

ಘಟನೆಯ ಸುದ್ದಿ ಹರಿದಂತೆ ಆಸ್ಪತ್ರೆ ಬಳಿ ಜನ ಗುಂಪುಗೂಡಿದ್ದು, ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. “ಪೊಲೀಸರು ಅನೇಕ ಸಲ ಹಣ ಕೇಳುತ್ತಿದ್ದರು. ಈ ಬಾರಿ ಹಣ ಇಲ್ಲದ ಕಾರಣ ಕೊಡಲು ಆಗಿರಲಿಕ್ಕಿಲ್ಲ,” ಎಂದು ಪತ್ನಿ ಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ. 

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕರು ಗಾಂಧಿ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಪೊಲೀಸರು ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಎಸ್ಪಿ ರಂಜಿತ್ ಕುಮಾರ್, “ಡ್ರಂಕ್ ಅಂಡ್ ಡ್ರೈವ್ ಕುರಿತು ವಿಚಾರಣೆ ವೇಳೆ ವಾಗ್ವಾದ ನಡೆದಿದೆ. PSI ಬರುವವರೆಗೆ ಕಾಯಲು ಸೂಚಿಸಿದ್ದರೂ ಚಾಲಕ ಆಟೋ ಬಿಟ್ಟು ಸ್ಥಳ ತೊರೆದಿದ್ದ. ಬಳಿಕ ವೃತ್ತದಲ್ಲಿ ಪೆಟ್ರೋಲ್ ಸುರಿದು ಬೆದರಿಸಲು ಪ್ರಯತ್ನಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ,” ಎಂದು ಹೇಳಿದ್ದಾರೆ. ಜೊತೆಗೆ, “ಇದು ಪೊಲೀಸರ ದೌರ್ಜನ್ಯವಲ್ಲ, ಸಾರ್ವಜನಿಕರ ನಿರ್ಲಕ್ಷ್ಯ. ಜನರು ಮಧ್ಯಪ್ರವೇಶಿಸಿದ್ದರೆ ಘಟನೆ ತಪ್ಪಬಹುದಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಟೋ ಚಾಲಕ ತಿಪ್ಪೇಸ್ವಾಮಿಯ ದೇಹ ಶೇ.50ರಷ್ಟು ಸುಟ್ಟಿದ್ದು, ಜಿಲ್ಲೆಯ ಆಸ್ಪತ್ರೆಯಿಂದ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 2
Wow Wow 0