ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

Dec 3, 2025 - 16:31
 0  376
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಮಡಿಕೇರಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾನು ಆಡಳಿತಕ್ಕೆ ಬಂದ ಆರಂಭದಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ೬,೦೦೦ ರೂಪಾಯಿಗಳೊಂದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿ.ಜೆ.ಪಿ ಸರ್ಕಾರ ರೂ.೪,೦೦೦ ಹೆಚ್ಚುವರಿಯಾಗಿ ಒಟ್ಟು ೧೦,೦೦೦ ರೂಪಾಯಿಗಳನ್ನು ನೀಡುತ್ತಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದೊಡನೆ ರಾಜ್ಯ ಸರ್ಕಾರದ ರೂ.೪,೦೦೦ ಅನ್ನು ಕಡಿತಗೊಳಿಸಿ ರೈತರಿಗೆ ನೇರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

 ಕೊಡಗಿನ ರೈತರು ಈಗಾಗಲೇ ಕಾಡು ಪ್ರಾಣಿಗಳ ಹಾವಳಿಯಿಂದ ಪ್ರಾಣ ಮತ್ತು ಬೆಳೆ ಹಾನಿಗೆ ಒಳಗಾಗಿದ್ದರೂ ಸರ್ಕಾರರ ಯಾವುದೇ ಶಾಶ್ವತ ಪರಿಹಾರ ಕೈಗೊಳ್ಳದೆ ರೈತರನ್ನು ಮತ್ತು ಅಮಾಯಕ ನಾಗರೀಕರನ್ನು ವಂಚಿಸುತ್ತಿದೆ. ಈ ಹಿಂದೆ ಭಾರತೀಯ ಜನತಾ ಪಕ್ಷದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭ ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಪ್ರಾರಂಭಿಸಿ ರೈತರ ಮಕ್ಕಳ ನೆರವಿಗೆ ಬಂದಿತ್ತು. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬಂದ ತಕ್ಷಣ ಈ ಯೋಜನೆಯನ್ನು ಕೈಬಿಟ್ಟಿದೆ.

ಕೊಡಗಿನಲ್ಲಿ ಅತೀವೃಷ್ಟಿಯಿಂದ ಕಾಫಿ ಫಸಲು, ಕಾಳುಮೆಣಸು, ಅಡಿಕೆ ಮತ್ತು ಇತರ ಬೆಳೆಗಳು ನಷ್ಟವಾಗಿದ್ದು, ರಾಜ್ಯ ಸರ್ಕಾರ ಸರ್ವೆ ಕಾರ್ಯ ನಡೆಸದೆ ಕೊಡಗಿನ ರೈತರಿಗೆ ಅನ್ಯಾಯ ಎಸಗಿದ್ದು ಸ್ಥಳೀಯ ಇಬ್ಬರು ಕಾಂಗ್ರೇಸ್ ಶಾಸಕರು ರೈತರ ಪರ ನಿಲ್ಲದೆ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಸಿ ಮತ್ತು ಡಿ ಜಾಗದಲ್ಲಿ ಮನೆ ಕಟ್ಟಿ, ಕೃಷಿ ಮಾಡಿಕೊಂಡು ಬಂದಿದ್ದರೂ ಆ ಸ್ಥಳದಿಂದ ರೈತರನ್ನು ಖಾಲಿ ಮಾಡಿಸಲು ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ರೈತ ವಿರೋಧಿ ನೀತಿ ಖಂಡನೀಯ ಎಂದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ಮಾಜಿ ಶಾಸಕ ಕೆ.ಜಿಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಕಾರ್ಯಕರ್ತರು, ರೈತ ಮೋರ್ಚ ಪದಾಧಿಕಾರಿಗಳು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0