ಬಿಜೆಪಿ ವಿರಾಜಪೇಟೆ ಮಂಡಲದಿಂದ ಅರಣ್ಯ ಕಚೇರಿಗೆ ಮುತ್ತಿಗೆ

ಬಿಜೆಪಿ ವಿರಾಜಪೇಟೆ ಮಂಡಲದಿಂದ ಅರಣ್ಯ ಕಚೇರಿಗೆ ಮುತ್ತಿಗೆ

ವಿರಾಜಪೇಟೆ: ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ಹಾಗೂ ಹುಲಿ ದಾಳಿಗೆ ಮಾನವ ಹಾಗೂ ರೈತರ ಜಾನುವಾರುಗಳು ಬಲಿಯಾಗಿ ಜನರು ತತ್ತರಿಸಿ ಹೋಗಿರುವುದನ್ನು ಖಂಡಿಸಿ ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಘಟನೆ ವಿರಾಜಪೇಟೆಯಲ್ಲಿ ನಡೆಯಿತು.

  ಮಾನವ-ವನ್ಯಜೀವಿ ಸಂಘರ್ಷ ಮುಂದುವರಿದ ಹಿನ್ನೆಲೆ ರೊಚ್ಚಿಗೆದ್ದ ರೈತರು, ಹಾಗೂ ಬಿಜೆಪಿಯವರು ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ವಿರಾಜಪೇಟೆಯ ಗಾಂಧಿನಗರದಲ್ಲಿರುವ ಅರಣ್ಯ ಇಲಾಖೆ ಮುತ್ತಿಗೆಗೆ ಯತ್ನಿಸಿ, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

   ಈ ವೇಳೆ ಅರಣ್ಯ ಇಲಾಖೆಯ ಕಛೇರಿ ಸುತ್ತಲೂ ಬಿಗಿ ಪೋಲಿಸ್ ಸರ್ಪಗಾವಲಿತ್ತು. 

  ಬಿಜೆಪಿಗರು ಪ್ರತಿಭಟನೆಗಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರನ್ನು ಅರಣ್ಯ ಇಲಾಖೆಯ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಬಿಸಿಲಿನಲ್ಲಿಯೇ ನಿಂತು ಪ್ರತಿಭಟಿಸಿ, ಧಿಕ್ಕಾರ ಕೂಗಿದರಲ್ಲದೆ, ಒಳಗೆ ಪ್ರವೇಶ ಕೊಡಿ ಎಂದರೂ ಪೋಲಿಸರು ಬಿಡಲೇ ಇಲ್ಲ. ಇದರಿಂದ ಬಿಜೆಪಿಯರು ರೊಚ್ಚಿಗೆದ್ದು ಅರಣ್ಯ ಇಲಾಖೆಯ ಒಳಗಡೆ ಬಿಡಿ. ನಾವು ಶಾಂತಿಯುತವಾಗಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ನಾವು ಗಲಭೆಪ್ರಿಯರಲ್ಲ. ನಾವೇನು ಪಾಕಿಸ್ತಾನದಿಂದ ಬಂದವರಲ್ಲ. ನೀವು ನಾಡಿಗೆ ಬಂದಾಗ ನಾವು ಸ್ವಾಗತಿಸಬೇಕು, ನಿಮ್ಮ ಕಛೇರಿಗೆ ಬಂದಾಗ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಕಾಡು ಪ್ರಾಣಿಗಳಿಂದ ರೈತರನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದ ಬಿಜೆಪಿಗರು ರಾಜ್ಯ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. 

  ಡಿಎಫ್‌ಒ ಅವರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.

   ಗೇಟಿನ ಬಳಿಗೆ ಬಂದ ಡಿಎಫ್‌ಒ ಅವರ ಬಳಿ ಪ್ರತಿಭಟನಾಕಾರರೂ ಎಷ್ಟೆ ಕೇಳಿಕೊಂಡರೂ ಅರಣ್ಯ ಇಲಾಖೆಯ ಒಳಗಡೆ ಪ್ರವೇಶಕ್ಕೆ ಅವಕಾಶವನ್ನು ನೀಡಲಿಲ್ಲ. ನಾವು ಶಾಂತಿಯುತವಾಗಿ ಮಾತನಾಡಿ, ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ವನ್ಯಜೀವಿಗಳ ಉಪಟಳದ ಬಗ್ಗೆ ನಮ್ಮ ಮನವಿ ಇದೆ. ನಮಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಅವರ ನೇತೃತ್ವದಲ್ಲಿ ಪೋಲಿಸರು ಮತ್ತು ಅರಣ್ಯ ಇಲಾಖೆಯವರು ಆಸ್ಪದ ನೀಡಲಿಲ್ಲ. ಈ ವೇಳೆ ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದಾಗ ಆಕ್ರೋಶಿತರಾದ ಬಿಜೆಪಿಗರು ಗೇಟಿಗೆ ಅಳವಡಿಸಿದ ಬ್ಯಾರಿಕೇಡ್‌ನ್ನು ತಳ್ಳಿ ಅರಣ್ಯ ಇಲಾಖೆಯ ಆವರಣ ಪ್ರವೇಶಿಸಿದರು. 

ಅರಣ್ಯ ಇಲಾಖೆ ಸುತ್ತ ಬಿಗಿ ಪೋಲಿಸ್ ಭದ್ರತೆಯನ್ನು ಮಾಡಿದ್ದೂ ಕುಳಿತು ಮಾತನಾಡಲು ಅವಕಾಶ ಕೊಡಿ ಎಂದರೂ ಬ್ಯಾರಿಕೇಡ್ ಅಳವಡಿಸಿ ಕಛೇರಿ ಒಳಗಡೆ ಪ್ರವೇಶಕ್ಕೆ ಅನುಮತಿಯನ್ನು ಅಧಿಕಾರಿಗಳು ನೀಡಲಿಲ್ಲ.

 ಇದರಿಂದ ಕುಪಿತಗೊಂಡ ಬಿಜೆಪಿಗರು, ಅಧಿಕಾರಿಗಳು ಪೋಲಿಸ್ ಬಂದೋಬಸ್ತ್ ಕಲ್ಪಿಸಿಕೊಂಡು ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುವುದು ಬೇಡ. ಸರಕಾರ ಯಾವಾಗ ಬೇಕಾದರೂ ಬದಲಾಗಬಹುದು. ಅಧಿಕಾರಿಗಳು ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ವನ್ಯ ಪ್ರಾಣಿಗಳ ನಿಯಂತ್ರಣ ಸಾಧ್ಯವಿಲ್ಲ ಅಂದರೆ ಕೆಲಸಕ್ಕೆ ರಾಜೀನಾಮೆ ನೀಡಿ ತೆರಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

   ಬಿಜೆಪಿಯ ಪ್ರಮುಖರು ಮಾತನಾಡಿ ಇತ್ತೀಚೆಗೆ ಕರ್ನಾಟಕ ರಾಜ್ಯದ ಅರಣ್ಯ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪೊನ್ನಂಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನೀಡಿರುವ ಭರವಸೆ ಹುಸಿಯಾಗಿದೆ. ಚುನಾವಣಾ ಸಮಯದಲ್ಲಿ ಶಾಸಕ ಪೊನ್ನಣ್ಣ ಆನೆ ಮಾನವ ಸಂಘರ್ಷ ತಡೆಗೆ ಆರು ತಿಂಗಳಲ್ಲಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಭರವಸೆ ಪ್ರಣಾಳಿಕೆಯಲ್ಲಿ ನೀಡಿದ್ದರೂ ಈ ಭರವಸೆಯೂ ಹುಸಿಯಾಗಿದೆ. ಕಾಡು ಪ್ರಾಣಿಗಳ ರಕ್ಷಣೆ ಜೊತೆಗೆ ಆನೆಯಿಂದ ಬೆಳೆ ನಾಶ, ಹುಲಿ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಮನವಿ ಅಲ್ಲ, ಎಚ್ಚರಿಕೆ ಕೊಟ್ಟಿದ್ದೇವೆ, 1 ತಿಂಗಳ ಡೆಡ್‌ಲೈನ್ ನೀಡಿದ್ದೇವೆ. ರೈತರು ಬದುಕು ಉಳಿಸಿಕೊಳ್ಳಲು ರಸ್ತೆಗೆ ಬರಬೇಕಾ? ಸರ್ಕಾರಕ್ಕೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ ರೈತರ ಸಮಸ್ಯೆಗೆ ಸ್ಪಂದಿಸಲಿ. ಕಾಡಾನೆ ಹಾವಳಿ ಇಡೀ ರಾಜ್ಯದ ಸಮಸ್ಯೆ. ಈ ಬಗ್ಗೆ ರಾಜ್ಯ ಸರ್ಕಾರ ಏನಾದರೂ ಯೋಚಿಸಿದೆಯೇ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

 ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ ಸುಜಾ ಕುಶಾಲಪ್ಪ ಮಾತನಾಡಿ ರೈಲ್ವೆ ಬ್ಯಾರಿಕೆಡ್‌ಗೆ 22 ಕೋಟಿ ಅನುದಾನ ಬಂದಿದೆ ಎಂದು ನೀವು ಅಧಿಕಾರಿಗಳು ಹೇಳುತ್ತಿದ್ದೀರಾ ಅದರ ಸಂಪೂರ್ಣ ಮಾಹಿತಿಯನ್ನು ಕೊಡಬೇಕು. ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಂದ 32 ಜನ ಮೃತಪಟ್ಟಿದ್ದಾರೆ. ವಿಶೇಷವಾಗಿ ಕೊಡಗು ಜಿಲ್ಲೆ ಅರಣ್ಯ ಪ್ರದೇಶದಿಂದ ಕೂಡಿದ ಜಾಗವಾಗಿದ್ದು ಅರಣ್ಯ ಇಲಾಖೆಯ ಸಿಸಿಎಫ್ ರವರ ಮೂಲಕ ಹೆಚ್ಚಿನ ಹಣಕಾಸಿಗೆ ಬೇಡಿಕೆ ಸಲ್ಲಿಸಿ ಅನುದಾನವನ್ನು ತರಬೇಕಾದದು ನಿಮ್ಮ ಕರ್ತವ್ಯ. ಆ ರೀತಿ ಮಾಡಿದರೆ ನಾನು ಖುದ್ದು ಮೇಲ್ಮನೆ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಅರಣ್ಯ ಸಚಿವರ ಜೊತೆಗೂ ಪ್ರಸ್ತಾಪ ಮಾಡಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

   ಮಾಜಿ ಶಾಸಕ ಕೆ.ಜಿ ಬೋಪಯ್ಯ, ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಚಿಮಂಡ ರವೀಂದ್ರ, ಕೇಳಪಂಡ ಸುಜು ನಾಣಯ್ಯ, ರೀನಾ ಪ್ರಕಾಶ್, ಸುವಿನ್ ಗಣಪತಿ ಇನ್ನಿತರ ಪಕ್ಷದ ಮುಖಂಡರುಗಳು ಮಾತನಾಡಿದರು.

 ಈ ಸಂದರ್ಭದಲ್ಲಿ ಡಿಸಿಎಫ್ ಜಗನ್ನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. 

   ಮನವಿಯನ್ನು ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಜಗನ್ನಾಥ್ ಅವರು ತಮ್ಮ ಬೇಡಿಕೆಗಳನ್ನು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ ಅವರ ಮಾರ್ಗದರ್ಶನದಂತೆ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಕಾಡಾನೆಗಳ ಹಾವಳಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ರೂಪಿಸಿರುವ ಯೋಜನೆಗಳ ಬಗ್ಗೆ ಪ್ರತಿಭಟನಾನಿರತರಿಗೆ ಮಾಹಿತಿ ನೀಡಿದರು. ಕೂಡಲೇ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸುವುದಾಗಿ ಭರವಸೆ ನೀಡಿದರು.

 ವನ್ಯಪ್ರಾಣಿಗಳಿಗಾಗಿ, ಅರಣ್ಯ, ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ಚೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ಇತರ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ.

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಣ ಹಾಗೂ ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆ ಹಳಿಗಳನ್ನು ಉಪಯೋಗಿಸಿ, ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಕಾಡಾನೆಗಳನ್ನು ಹಿಮ್ಮೆಟ್ಟಿಸುವ ತಂಡ (ಂಆಅ) ಹಾಗೂ ಕ್ರಿಪ್ ತಂಡ (ಖಖಖಿ) ಗಳನ್ನು ರಚಿಸಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಮ್ಮ ಬೇಡಿಕೆಗಳನ್ನು ಒಂದು ತಿಂಗಳೋಳಗೆ ಈಡೇರಿಸಬೇಕು. ತಪ್ಪಿದ್ದಲ್ಲಿ ತೀವ್ರತರದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು.

    ಪ್ರತಿಭಟನೆಯಲ್ಲಿ ವಿರಾಜಪೇಟೆ ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಪ್ರ.ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಕಾರ್ಯದರ್ಶಿ ಮುದ್ದಿಯಂಡ ಮಂಜು, ವಿರಾಜಪೇಟೆ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಮಾಜಿ ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಾಟೇರಿರ ಬೋಪಣ್ಣ, ಕಾನೂನು ಸಲಹೆಗಾರ ಪುಲಿಯಂಡ ಪೊನ್ನಣ್ಣ, ಮಾಚಿಮಂಡ ವಸಂತ, ಮಲ್ಲಂಡ ಮಧು, ಶಶಿ ಸುಬ್ರಮಣಿ, ಕೂತಂಡ ಸಚಿನ್, ವಾಟೇರಿರ ವಿರಜ್, ಕಾಂತಿ ಸತೀಶ್, ರೀನಾ ಪ್ರಕಾಶ್, ಬೊಪ್ಪಂಡ ಸುನಿತಾ(ಜೂನ) ಪಿ.ಜಿ. ಸುಮೇಶ್, ಚಕ್ಕೆರ ಸೂರ್ಯ, ಅಚ್ಚಪಂಡ ಮಹೇಶ್, ಅಭಿಜಿತ್, ಇನ್ನಿತರ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.