ಬೆಂಗಳೂರು | ಪಾರ್ಟ್‌ಟೈಮ್ ಕೆಲಸದ ಆಫರ್ ನಂಬಿ ಸೈಬರ್ ಕ್ರೈಂ ಗೆ 67 ಲಕ್ಷ ರೂ. ಕಳೆದುಕೊಂಡ ಖಾಸಗಿ ಕಂಪೆನಿ ಉದ್ಯೋಗಿ
ಬೆಂಗಳೂರು,ಅ. 8: ಟೆಲಿಗ್ರಾಮ್ ಆ್ಯಪ್‌ನಲ್ಲಿ ಬಂದ ಪಾರ್ಟ್‌ಟೈಮ್ ಕೆಲಸದ ಆಫರ್ ನಂಬಿದ ಖಾಸಗಿ ಕಂಪೆನಿಯ ಉದ್ಯೋಗಿ ರೂ.67 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ನಗರದ ನಿವಾಸಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 47 ವರ್ಷದ ವ್ಯಕ್ತಿ ಈ ವಂಚನೆಯ ಸಂತ್ರಸ್ತ ಎನ್ನಲಾಗಿದೆ.
ಜನವರಿ 11, 2025ರಂದು ಟೆಲಿಗ್ರಾಂನಲ್ಲಿ ಬಂದ “ಅಮೆಜಾನ್ ಇಂಡಿಯಾ ಪಾರ್ಟ್‌ಟೈಮ್ ಬೆನಿಫಿಟ್ ಜಾಬ್” ಎಂಬ ಗ್ರೂಪ್‌ಗೆ ಸೇರಿದ್ದ ಸಂತ್ರಸ್ತ ಆ ಗ್ರೂಪ್‌ನ ನಿರ್ವಾಹಕರು “ಪ್ರೊಡಕ್ಟ್ ರಿವೀವ್ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು” ಎಂಬ ಆಮಿಷ ನೀಡಿದ್ದರು.
ಪ್ರಾರಂಭದಲ್ಲಿ ₹1,000 ಹೂಡಿಕೆ ಮಾಡಿದ ಸಂತ್ರಸ್ತಗೆ ₹1,650 ಮರಳಿ ಬಂದಿದ್ದು, ಇದರಿಂದ ವಿಶ್ವಾಸಗೊಂಡ ಅವರು ಕ್ರಮೇಣ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದರು. ಬಳಿಕ ವಂಚಕರು “ಹೆಚ್ಚು ಲಾಭ ಸಿಗಲಿದೆ” ಎಂಬ ನೆಪದಲ್ಲಿ ಅವರನ್ನು ಮತ್ತಷ್ಟು ಹಣ ಪಾವತಿಸಲು ಪ್ರೇರೇಪಿಸಿದರು.
ಹೀಗೆ ಕೇವಲ ಏಳು ತಿಂಗಳ ಅವಧಿಯಲ್ಲಿ ಸತೀಶ್ ಇಬ್ಬರು ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಖಾತೆಗಳಿಗೆ ಒಟ್ಟು ₹67,63,950 ವರ್ಗಾಯಿಸಿದ್ದರು. ನಂತರ ಯಾವುದೇ ಲಾಭವಿಲ್ಲದೆ ಹಣ ವಾಪಾಸು ಸಿಗದಿದ್ದಾಗ ವಂಚನೆ ಅರಿತ ಅವರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ವಂಚಕರು ವಿದೇಶ ಮೂಲದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
“ಆನ್ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬರುವ ಪಾರ್ಟ್‌ಟೈಮ್ ಕೆಲಸ ಅಥವಾ ಹೂಡಿಕೆ ಆಫರ್‌ಗಳಿಗೆ ಮರುಳಾಗಬಾರದು. ಯಾವುದೇ ರೀತಿಯ ಹಣಕಾಸು ವ್ಯವಹಾರಕ್ಕೂ ಮೊದಲು ಅದರ ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಪೊಲೀಸರು ತಿಳಿಸಿದ್ದಾರೆ.