ಬೆಂಗಳೂರು ದರೋಡೆ ಪ್ರಕರಣ: ಮತ್ತೆ ಮೂವರ ಬಂಧನ, 70 ಲಕ್ಷ ರೂ. ವಶ

Nov 22, 2025 - 19:03
 0  533
ಬೆಂಗಳೂರು ದರೋಡೆ ಪ್ರಕರಣ: ಮತ್ತೆ ಮೂವರ ಬಂಧನ, 70 ಲಕ್ಷ ರೂ. ವಶ
Photo credit: TV09

ಬೆಂಗಳೂರು, ನ.22: ನಗರದ ಹೃದಯಭಾಗದಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಸಿದ್ದಾಪುರ ಠಾಣೆ ಪೊಲೀಸರು ಮತ್ತೂ ಮೂವರನ್ನು ಬಂಧಿಸಿದ್ದಾರೆ. ಹೈದರಾಬಾದ್‌ನ ಲಾಡ್ಜ್‌ನಲ್ಲಿ ಅಡಗಿ ಕುಳಿತಿದ್ದ ನವೀನ್, ನೆಲ್ಸನ್ ಹಾಗೂ ರವಿ ಬಂಧಿತರು. ಇವರಿಂದ 70 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದ್ದು, ಇದುವರೆಗೆ ಒಟ್ಟು 6 ಕೋಟಿ 45 ಲಕ್ಷ ರೂ. ಹಣ ಪೊಲೀಸರ ಕೈಗೆ ಸಿಕ್ಕಿದೆ. ಇನ್ನೂ 67 ಲಕ್ಷ ರೂ. ಪತ್ತೆಯಾಗಬೇಕಿದೆ.

ಬಂಧಿತರನ್ನು ಬೆಂಗಳೂರಿಗೆ ತರಲಾಗಿದ್ದು, ಮತ್ತಿಬ್ಬರು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯ ಕೈವಾಡವಿರುವುದು ಬಯಲಾಗಿದ್ದು, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ, ಸಿಎಂಎಸ್ ಕಂಪೆನಿಯ ಹಳೆಯ ಉದ್ಯೋಗಿ ಕ್ಸೇವಿಯರ್ ಮತ್ತು ವಾಹನ ಮೇಲ್ವಿಚಾರಕ ಗೋಪಾಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. 

ಶನಿವಾರ ಬಂಧಿತ ಮೂವರನ್ನು 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹತ್ತು ದಿನ ಪೊಲೀಸ್ ಕಸ್ಟಡಿಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯವು ಕ್ಸೇವಿಯರ್, ಅಣ್ಣಪ್ಪ ಮತ್ತು ಗೋಪಾಲ್‌ ರನ್ನು ಡಿಸೆಂಬರ್ 1ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅರೆಸ್ಟ್ ಸಮಯದ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದಾಗ, “ನಿನ್ನೆ ಸಂಜೆ ಬಂಧಿಸಲಾಗಿದೆ, ಗುರುವಾರ ನೋಟಿಸ್ ನೀಡಲಾಗಿತ್ತು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 19ರಂದು ಮಧ್ಯಾಹ್ನವೇ ಕೇವಲ ಏಳು ನಿಮಿಷಗಳಲ್ಲಿ 7 ಕೋಟಿ ರೂ. ದೋಚಿದ ಈ ಗ್ಯಾಂಗ್, ನಗರ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0