ಬೆಂಗಳೂರು | ಸಾಲ ತೀರಿಸಲು ವೃದ್ಧೆಯ ಕೊಲೆ ಮಾಡಿದ ದಂಪತಿಯ ಬಂಧನ : 24 ಗಂಟೆಗಳಲ್ಲಿ ಸೆರೆಸಿಕ್ಕ ಆರೋಪಿಗಳು

Nov 6, 2025 - 19:34
 0  466
ಬೆಂಗಳೂರು | ಸಾಲ ತೀರಿಸಲು ವೃದ್ಧೆಯ ಕೊಲೆ ಮಾಡಿದ ದಂಪತಿಯ ಬಂಧನ  : 24 ಗಂಟೆಗಳಲ್ಲಿ  ಸೆರೆಸಿಕ್ಕ ಆರೋಪಿಗಳು

ಬೆಂಗಳೂರು: ಸಾಲ ತೀರಿಸಲು ವೃದ್ಧೆಯನ್ನು ಹತ್ಯೆ ಮಾಡಿ ಮಾಂಗಲ್ಯ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದ ಬಾಡಿಗೆದಾರ ದಂಪತಿಯನ್ನು ಕೇವಲ 24 ಗಂಟೆಗಳಲ್ಲೇ ಬಂಧಿಸುವಲ್ಲಿ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಹಳ್ಳಿಯ ನ್ಯೂಮಿಲೆನಿಯಂ ರಸ್ತೆಯ ನಿವಾಸಿ ಲಕ್ಷ್ಮೀ (60) ಕೊಲೆಯಾದ ವೃದ್ಧೆ. ಬಂಧಿತರನ್ನು ಪ್ರಸಾದ್ ಶ್ರೀಶೈಲ ಮಕಾಯ್ (26) ಮತ್ತು ಆತನ ಪತ್ನಿ ಸಾಕ್ಷಿ ಹಣಮಂತ ಹೊದ್ದೂರು (23) ಎಂದು ಗುರುತಿಸಲಾಗಿದೆ. ಆರೋಪಿಗಳು ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಕಳೆದ ಆರು ತಿಂಗಳಿಂದ ಲಕ್ಷ್ಮೀ ಮತ್ತು ಅವರ ಪತಿ ಅಶ್ವತ್ಥನಾರಾಯಣ ದಂಪತಿಯ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ನವೆಂಬರ್ 4ರಂದು ಬೆಳಿಗ್ಗೆ ಅಶ್ವತ್ಥನಾರಾಯಣ ಅವರು ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಒಬ್ಬರೇ ಇದ್ದ ಲಕ್ಷ್ಮೀ ಅವರನ್ನು ಆರೋಪಿಗಳು ಕೊಲೆಮಾಡಿ, ಅವರ ಮಾಂಗಲ್ಯ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಂಜೆ ಮನೆಗೆ ಮರಳಿದ ಅಶ್ವತ್ಥನಾರಾಯಣ ಪತ್ನಿಯನ್ನು ಮೃತ ಸ್ಥಿತಿಯಲ್ಲಿ ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕೇವಲ ಒಂದು ದಿನದಲ್ಲೇ ಆರೋಪಿ ದಂಪತಿಯನ್ನು ಬಂಧಿಸಿದರು.

ತನಿಖೆಯಲ್ಲಿ, ಪ್ರಸಾದ್ ಅವರು ಸೊಲ್ಲಾಪುರದಲ್ಲಿ ಮಾಡಿದ ಸಾಲ ತೀರಿಸಲು ಹಣದ ಅವಶ್ಯಕತೆ ಇದ್ದು, ಅದಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದು ಬಹಿರಂಗವಾಗಿದೆ.

ಲಕ್ಷ್ಮೀ ಮತ್ತು ಅಶ್ವತ್ಥನಾರಾಯಣ ದಂಪತಿಗೆ ಮಕ್ಕಳು ಇರಲಿಲ್ಲ. ಕೋಟ್ಯಂತರ ಮೌಲ್ಯದ ಕಟ್ಟಡ ಮತ್ತು ಬಾಡಿಗೆ ಆದಾಯ ಹೊಂದಿದ್ದ ಈ ದಂಪತಿಯನ್ನು ಗಮನಿಸಿದ ಆರೋಪಿಗಳು ಹಣ ಅಥವಾ ಚಿನ್ನಾಭರಣ ದೋಚುವ ಉದ್ದೇಶದಿಂದ ಸಂಚು ರೂಪಿಸಿದ್ದರು.

ಲಕ್ಷ್ಮೀ ಅವರಿಂದ ಚಿನ್ನಾಭರಣ ಹಾಗೂ ನಗದು ಕೇಳಿದಾಗ ಅವರು ನಿರಾಕರಿಸಿದ್ದರಿಂದ ಆರೋಪಿಗಳು ಅವರ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮಾಂಗಲ್ಯ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದರು.  

ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ತನಿಖೆ ನಡೆಸಿ, ಕಳವಾದ ಆಭರಣ ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0