ಬೆಂಗಳೂರು: ಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದವನಿಂದ ಖಾರದಪುಡಿ ಎರಚಿ ಇರಿದು ವಿದ್ಯಾರ್ಥಿನಿಯ ಹತ್ಯೆ

Oct 17, 2025 - 10:18
 0  990
ಬೆಂಗಳೂರು: ಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದವನಿಂದ ಖಾರದಪುಡಿ ಎರಚಿ ಇರಿದು ವಿದ್ಯಾರ್ಥಿನಿಯ ಹತ್ಯೆ

ಬೆಂಗಳೂರು: ನಗರದ ಮಂತ್ರಿ ಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಯು ಖಾರದಪುಡಿ ಎರಚಿ, ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

 ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ತೀವ್ರ ಶೋಧಕಾರ್ಯ ಕೈಗೊಂಡಿದ್ದಾರೆ.

ಹತ್ಯೆಯಾದ ಯುವತಿಯನ್ನು ಯಾಮಿನಿ ಪ್ರಿಯಾ (20) ಎಂದು ಗುರುತಿಸಲಾಗಿದೆ. ಬನಶಂಕರಿಯ ಖಾಸಗಿ ಕಾಲೇಜೊಂದರಲ್ಲಿ ಬಿಫಾರ್ಮ್ ನಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನ ಕಾಲೇಜು ಮುಗಿಸಿ ಸ್ವಾತಂತ್ರ್ಯ ನಗರದಲ್ಲಿರುವ ಮನೆಗೆ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.

 ಮಂತ್ರಿ ಮಾಲ್ ಹಿಂಭಾಗದ ರೈಲ್ವೇ ಟ್ರ್ಯಾಕ್ ಬಳಿ ತಲುಪುತ್ತಿದ್ದ ವೇಳೆ, ವಿಶ್ವೇಶ್ ಎಂಬ ಯುವಕ ಹಿಂಬದಿಯಿಂದ ಬಂದು ಮೊದಲು ಯಾಮಿನಿಯ ಮುಖದ ಮೇಲೆ ಖಾರದಪುಡಿ ಎರಚಿ, ನಂತರ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಆರೋಪಿಯು ಹಲವು ತಿಂಗಳಿನಿಂದ ಯಾಮಿನಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದು, ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾಮಿನಿಯ ತಂದೆ ಗೋಪಾಲ್ ಅವರು ಆರು ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ ಆರೋಪಿಯನ್ನು ಕರೆಯಿಸಿಕೊಂಡು ಎಚ್ಚರಿಕೆ ನೀಡಲಾಗಿತ್ತು ಮತ್ತು ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು.

 “ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಖಾರದಪುಡಿ ಎರಚಿ, ಚಾಕುವಿನಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಪ್ರೇಮ ಸಂಬಂಧಿತ ವಿಚಾರವೇ ಕಾರಣವಾಗಿರುವ ಸಾಧ್ಯತೆ ಇದೆ. ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧಕಾರ್ಯ ಮುಂದು,” ಎಂದು ಘಟನೆಯ ಕುರಿತು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 1
Sad Sad 0
Wow Wow 0