ಸ್ಫೋಟ ಪ್ರಕರಣ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಅಪಘಾತ ಮಾತ್ರ: ಸಂಸದ ಯದುವೀರ್

Dec 27, 2025 - 10:30
 0  451
ಸ್ಫೋಟ ಪ್ರಕರಣ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಅಪಘಾತ ಮಾತ್ರ: ಸಂಸದ ಯದುವೀರ್
Photo credit: Etv bharath

ಮೈಸೂರು: ಮೈಸೂರು ಅರಮನೆ ಎದುರು ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣವು ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಅದು ಅಪಘಾತ ಎಂದು ರಾಜವಂಶಸ್ಥ ಹಾಗೂ ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೇಳಿದರು. ಈ ಘಟನೆಯಲ್ಲಿ ಮೃತಪಟ್ಟವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಅವಕಾಶವಿದೆ ಎಂದೂ ಅವರು ತಿಳಿಸಿದರು.

ಸಂಸದ ಯದುವೀರ್ ಅವರು ಶಾಸಕ ಶ್ರೀವತ್ಸ ಅವರೊಂದಿಗೆ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ಬಳಸುತ್ತಿದ್ದ ಹೀಲಿಯಂ ಗ್ಯಾಸಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಲೀಂ ಎಂಬ ವ್ಯಕ್ತಿ ಮೃತಪಟ್ಟಿದ್ದು, ಗಾಯಗೊಂಡ ಐವರಲ್ಲಿ ನಂಜನಗೂಡಿನ ಮಂಜುಳಾ ಎಂಬ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.

“ಈ ವಿಚಾರದಲ್ಲಿ ರಾಜಕೀಯ ಮಾಡುವ ಉದ್ದೇಶ ನನಗಿಲ್ಲ. ಅಸಂಘಟಿತ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯ ಕಲ್ಪಿಸುವ ಕುರಿತು ಪಾಲಿಕೆಯೊಂದಿಗೆ ಮಾತನಾಡಿದ್ದೇನೆ. ಆದರೆ ಆಯುಕ್ತರಿಂದ ಇದುವರೆಗೆ ಕ್ರಮ ಕೈಗೊಳ್ಳಲಾಗಿಲ್ಲ,” ಎಂದು ಅವರು ಹೇಳಿದರು. ಅಧಿಕಾರಿಗಳು ಅಸಂಘಟಿತ ವ್ಯಾಪಾರಿಗಳನ್ನು ಗುರುತಿಸಿ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕಿದೆ ಎಂದರು.

ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರಿತವೋ ಎಂಬುದು ತನಿಖಾ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಹೇಳಿದ ಅವರು, ಇಂತಹ ಘಟನೆಗಳು ಪ್ರವಾಸೋದ್ಯಮಕ್ಕೆ ಹೊಡೆತ ನೀಡುತ್ತವೆ ಎಂದರು. ಹಂಪಿಯಲ್ಲಿ ನಡೆದ ಕೊಲೆ ಪ್ರಕರಣದ ಬಳಿಕ ಪ್ರವಾಸೋದ್ಯಮದಲ್ಲಿ ಶೇ.80ರಷ್ಟು ಇಳಿಕೆ ಕಂಡಿರುವುದನ್ನು ಉದಾಹರಿಸಿದ ಯದುವೀರ್, ಪ್ರವಾಸಿ ಕೇಂದ್ರಗಳಿಗೆ ಸರ್ಕಾರ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮೈಸೂರು ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿ, ಸೈಕಲ್‌ನಲ್ಲಿ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಬಳಿ ಇದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಬಲೂನ್ ಮಾರುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಮುಂದೆ ಸಾಗುತ್ತಿದ್ದವರಿಗೂ ಗಾಯಗಳಾಗಿವೆ. ಗಾಯಾಳುಗಳಲ್ಲಿ ಒಬ್ಬರು ನಂಜನಗೂಡಿನವರು, ಮತ್ತೊಬ್ಬರು ಬೆಂಗಳೂರಿನವರು ಹಾಗೂ ಮೂವರು ಸ್ಥಳೀಯರು. ಅವರು ಇನ್ನೂ ಮಾತನಾಡಲು ಸಾಧ್ಯವಾಗಿಲ್ಲ; ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0