ದೇವಾಲಯದ ಮುಂದೆ ರಕ್ತಪಾತ; ಸಂಬಂಧಿಕರೇ ಆರೋಪಿಗಳು

Dec 25, 2025 - 23:46
 0  753
ದೇವಾಲಯದ ಮುಂದೆ ರಕ್ತಪಾತ; ಸಂಬಂಧಿಕರೇ ಆರೋಪಿಗಳು
Photo credit: TV09

ಧಾರವಾಡ, ಡಿ. 24: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಣಸಿಕಟ್ಚಿ ಗ್ರಾಮದಲ್ಲಿ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಭಾವನನ್ನು ಪೊಲೀಸರು ಬಂಧಿಸಿದ್ದು, ಇತರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ವಿಟ್ಠಲ್ ಕೂರಾಡಿ ಹುಣಸಿಕಟ್ಚಿ ಗ್ರಾಮದ ಕಸ್ತೂರಿ ಅವರನ್ನು ವಿವಾಹವಾಗಿದ್ದು, ಪೆಂಡಾಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯಪಾನ ವ್ಯಸನದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ನಿರಂತರ ಕಲಹ ನಡೆಯುತ್ತಿದ್ದು, ಪತ್ನಿ ಮಕ್ಕಳೊಂದಿಗೆ ತವರುಮನೆಗೆ ತೆರಳಿ ನೆಲೆಸಿದ್ದರು. ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ವಿಟ್ಠಲ್ ಆಗಾಗ ಮಾವನ ಮನೆಗೆ ಬಂದು ಹೋಗುತ್ತಿದ್ದ. ಸೋಮವಾರ ರಾತ್ರಿ ಕೂಡ ಅಲ್ಲಿಗೆ ಆಗಮಿಸಿ, ಗ್ರಾಮದ ಬಸಪ್ಪನ ದೇವಸ್ಥಾನದ ಆವರಣದಲ್ಲಿ ಮಲಗಿದ್ದರು. ಆದರೆ ಬೆಳಗಿನ ಜಾವ ದೇವಸ್ಥಾನದ ಎದುರೇ ರಕ್ತಸಿಕ್ತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿತು.

ಮಾಹಿತಿ ತಿಳಿದ ತಕ್ಷಣ ಕಲಘಟಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ತನಿಖೆಯಲ್ಲಿ ವಿಟ್ಠಲ್‌ನ ಸಹೋದರ ಅಣ್ಣಪ್ಪ ಹಾಗೂ ಪತ್ನಿ ಕಸ್ತೂರಿಯ ಸಹೋದರ ಪುಂಡಲೀಕ ಆರೋಪಿಗಳೆಂದು ಪತ್ತೆಯಾಗಿದೆ.

ಪೊಲೀಸರ ಪ್ರಕಾರ, ವಿಟ್ಠಲ್ ಮದ್ಯಪಾನಕ್ಕೆ ಒಳಗಾಗಿ ಕಳ್ಳತನಕ್ಕೂ ತೊಡಗುತ್ತಿದ್ದ ಎನ್ನಲಾಗಿದೆ. ಈ ಹಿಂದೆ ತನ್ನ ಸಹೋದರನ ಬೈಕ್ ಕದ್ದು ಬೆಂಕಿ ಹಚ್ಚಿದ್ದರಿಂದ ಅಣ್ಣಪ್ಪನಲ್ಲಿ ಆತನ ವಿರುದ್ಧ ತೀವ್ರ ಅಸಮಾಧಾನ ಇತ್ತು. ಮದ್ಯಪಾನ ಮಾಡಿ ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದ ಕಾರಣ ಪುಂಡಲೀಕ ಕೂಡ ಆತನ ವಿರುದ್ಧ ಸಿಟ್ಟುಗೊಂಡಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಸಂಚು ರೂಪಿಸಿ, ವಿಟ್ಠಲ್‌ಗೆ ಮದ್ಯಪಾನ ಮಾಡಿಸಿ, ರಾತ್ರಿ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಇನ್ನಾರಾದರೂ ಸಹಕಾರ ನೀಡಿದ್ದಾರೆಯೇ ಎಂಬ ಅಂಶವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0