ಕ್ಷುಲ್ಲಕ ಕಾರಣಕ್ಕೆ ಸಹೋದರರ ಭೀಕರ ಕಾಳಗ | ಅಣ್ಣನನ್ನೇ ಲಾಂಗು ಹಿಡಿದು ಕೊಂದ ತಮ್ಮ!

Nov 28, 2025 - 21:15
 0  1.9k
ಕ್ಷುಲ್ಲಕ ಕಾರಣಕ್ಕೆ ಸಹೋದರರ ಭೀಕರ ಕಾಳಗ |  ಅಣ್ಣನನ್ನೇ ಲಾಂಗು ಹಿಡಿದು ಕೊಂದ ತಮ್ಮ!
Photo credit: TV09 (ಫೋಟೋ: ತಮ್ಮ & ಅಣ್ಣ)

ಕೋಲಾರ, ನ. 28: ಮಿಲ್ಲತ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ ಎನ್ನಲಾದ ಕುಟುಂಬದೊಳಗಿನ ಕಲಹ ಭೀಕರ ಹತ್ಯೆಗೆ ತಿರುಗಿದೆ. ಟೀ ಅಂಗಡಿ ಎದುರು ನಡೆದ ಘಟನೆಯಲ್ಲಿ ಒಡಹುಟ್ಟಿದ ತಮ್ಮ ಸಾಜಿದ್, ಅಣ್ಣ ಸಲ್ಮಾನ್ ಮೊಹಮ್ಮದ್‌ ಅವರನ್ನು ಲಾಂಗು ಹಿಡಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಪ್ರಕರಣ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪೊಲೀಸರು ನೀಡಿದ ಮಾಹಿತಿಯಂತೆ, ರಾತ್ರಿ ಸುಮಾರು 11 ಗಂಟೆಗೆ ಟಾಟಾ ಸುಮೋ ಕಾರಿನಲ್ಲಿ ಬಂದಿದ್ದ ಸಾಜಿದ್, ಅಣ್ಣ ಸಲ್ಮಾನ್ ಜೊತೆ ವಾಗ್ವಾದ ನಡೆಸಿ, ಕಾರಿನಿಂದ ಲಾಂಗು ತೆಗೆದು ನಿರಂತರವಾಗಿ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ಕೊಚ್ಚುವ ದೃಶ್ಯ ಅಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ಕ್ರೌರ್ಯವನ್ನು ತೋರಿಸಿದೆ. ಹಲ್ಲೆ ನಂತರ ಆರೋಪಿ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಸಲ್ಮಾನ್‌ರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಪೊಲೀಸರು ತಕ್ಷಣವೇ ಕಾರ್ಯಚರಣೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಸಾಜಿದ್‌ನ್ನು ಬಂಧಿಸಿದ್ದಾರೆ.

ಪ್ರಶಾಂತ್ ನಗರ ನಿವಾಸಿ ದಂಪತಿ ಜಾಫರ್ ಹಾಗೂ ಫರಾನಾಗೆ ಸಾಧಿಕ್, ಸಲ್ಮಾನ್ ಮತ್ತು ಸಾಜಿದ್ ಎಂಬ ಮೂವರು ಗಂಡು ಮಕ್ಕಳು. ದಶಕದ ಹಿಂದೆ ತಂದೆ ನಿಧನವಾದ ಬಳಿಕ ತಾಯಿಯೇ ಕೂಲಿ ಕೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದಾಳೆ. ಮೂವರೂ ಅವಿವಾಹಿತರು.

ಕುಟುಂಬ ಮೂಲಗಳ ಪ್ರಕಾರ, ಸಲ್ಮಾನ್ ಕೆಲವು ದುಷ್ಚಟಗಳಿಗೆ ಒಳಗಾಗಿದ್ದು, ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಿದ್ದ. ಇದಲ್ಲದೆ, ಹಿಂದಿನ ಒಂದು ಕೊಲೆ ಪ್ರಕರಣದಲ್ಲೂ ಅವರು ಆರೋಪಿ ಆಗಿದ್ದು, ಅದರ ವಿಚಾರಣೆ ನವೆಂಬರ್ 27ರಂದು ಕೋರ್ಟ್‌ನಲ್ಲಿ ನಡೆದಿತ್ತು. ವಕೀಲರಿಗೆ ಹಣ ನೀಡುವ ವಿಚಾರದಲ್ಲಿ ಸಹೋದರರ ನಡುವೆ ಜಗಳ ಸಂಭವಿಸಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಅದೇ ದಿನ ಮನೆಗೆ ಮರಳಿದ ಸಲ್ಮಾನ್ ತಾಯಿಯೊಂದಿಗೆ ಗಲಾಟೆ ನಡೆಸಿದ್ದರೆಂದು ಕುಟುಂಬದವರು ಹೇಳುತ್ತಾರೆ. ಈ ಎಲ್ಲದರಿಂದ ಬೇಸತ್ತಿದ್ದ ಸಾಜಿದ್, ರಾತ್ರಿ ಟೀ ಅಂಗಡಿ ಬಳಿ ಕುಳಿತಿದ್ದ ಅಣ್ಣನೊಂದಿಗೆ ಮತ್ತೆ ವಾಗ್ವಾದ ನಡೆಸಿ ಆಕ್ರೋಶದಲ್ಲಿ ಹತ್ಯೆಗೈದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0