ಚಿತ್ರದುರ್ಗದಲ್ಲಿ ಬಸ್ ಬೆಂಕಿಗೆ ಆಹುತಿ | ಮಗಳೇ ಎಲ್ಲಿದ್ದೀಯಮ್ಮ.... ಆಸ್ಪತ್ರೆಯಲ್ಲಿ ಫೋಟೋ ಹಿಡಿದು ಏ. 28ಕ್ಕೆ ಮದುವೆಯಾಗಲಿದ್ದ ಮಗಳ ಹುಡುಕಾಡಿದ ಅಪ್ಪ...

Dec 25, 2025 - 12:53
Dec 25, 2025 - 14:59
 0  2.5k
ಚಿತ್ರದುರ್ಗದಲ್ಲಿ ಬಸ್ ಬೆಂಕಿಗೆ ಆಹುತಿ | ಮಗಳೇ ಎಲ್ಲಿದ್ದೀಯಮ್ಮ.... ಆಸ್ಪತ್ರೆಯಲ್ಲಿ ಫೋಟೋ ಹಿಡಿದು ಏ. 28ಕ್ಕೆ ಮದುವೆಯಾಗಲಿದ್ದ ಮಗಳ ಹುಡುಕಾಡಿದ ಅಪ್ಪ...

ಚಿತ್ರದುರ್ಗ: ಮಧ್ಯರಾತ್ರಿ ಚಿತ್ರದುರ್ಗದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತವು ಹಲವು ಕುಟುಂಬಗಳ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಅಪಘಾತದ ಬಳಿಕ ನವ್ಯ ಮತ್ತು ಮಾನಸ ಎಂಬ ಇಬ್ಬರು ಯುವತಿಯರ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇರುವುದರಿಂದ, ಅವರ ಪೋಷಕರು ತೀವ್ರ ಆತಂಕದಲ್ಲಿದ್ದಾರೆ.

ಅಪಘಾತದ ಸುದ್ದಿ ತಿಳಿದ ತಕ್ಷಣವೇ ನವ್ಯ ತಂದೆ ಮಂಜಪ್ಪ ಹಾಗೂ ಮಾನಸ ತಾಯಿ ದ್ರಾಕ್ಷಾಯಣಿ ಅವರು ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಗೆ ಧಾವಿಸಿದರು. ಅಲ್ಲಿಂದ ಆರಂಭವಾದ ಹುಡುಕಾಟ ಇನ್ನೂ ಮುಂದುವರಿದಿದೆ. ಪ್ರತಿ ವಾರ್ಡ್‌, ಪ್ರತಿ ಹಾಸಿಗೆಯನ್ನು ಪರಿಶೀಲಿಸುತ್ತಾ, ಗಾಯಾಳುಗಳ ಪಟ್ಟಿಯನ್ನು ನೋಡುತ್ತಾ, ಒಂದಾದರೂ ಸುಳಿವು ಸಿಗಬಹುದೆಂಬ ನಿರೀಕ್ಷೆಯಲ್ಲಿ ಅವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಮಗಳ ಫೋಟೋ ಹಿಡಿದುಕೊಂಡು ಹುಡುಕಾಟ ನಡೆಸುತ್ತಿರುವ ತಂದೆಯ ದೃಶ್ಯಗಳು ಮನಕಲಕುವಂತಿವೆ.

ನವ್ಯ, ಮಾನಸ ಮತ್ತು ಮಿಲನಾ ಮೂವರು ಆಪ್ತ ಸ್ನೇಹಿತೆಯರು. ಒಟ್ಟಿಗೆ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಪೂರ್ಣಗೊಳಿಸಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಸದ್ಯ ರಜೆ ಇದ್ದ ಕಾರಣ ಧಾರ್ಮಿಕ ಪ್ರವಾಸಕ್ಕಾಗಿ ಸಿಗಂದೂರಿಗೆ ಹೊರಟಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಬೆಳಿಗ್ಗೆ ಸುಮಾರು 7 ಗಂಟೆಗೆ ಸ್ನೇಹಿತೆ ಮಿಲನಾ ಕರೆ ಮಾಡಿದ ಬಳಿಕವೇ ಅಪಘಾತದ ವಿಷಯ ಪೋಷಕರಿಗೆ ತಿಳಿದುಬಂದಿದೆ.

“ನನಗೆ ಒಬ್ಬನೇ ಮಗ ಮತ್ತು ಒಬ್ಬಳೇ ಮಗಳು. ಏಪ್ರಿಲ್‌ 28ರಂದು ನವ್ಯ ಮದುವೆ ನಿಗದಿಯಾಗಿತ್ತು. ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ನಮ್ಮ ಕುಟುಂಬಕ್ಕೆ ಇಂದು ಈ ದುರಂತ ಎದುರಾಗಿದೆ,” ಎಂದು ತಂದೆ ಮಂಜಪ್ಪ ಕಣ್ಣೀರಿನಿಂದ ಹೇಳಿದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 6
Wow Wow 0