ಚಿತ್ರದುರ್ಗದಲ್ಲಿ ಬಸ್–ಲಾರಿ ಡಿಕ್ಕಿ; ಮದುವೆಗೆ ಮುನ್ನವೇ ಯುವತಿ ಮೃತ್ಯು, ತಾಯಿ ಮಗು ಬಲಿ!

Dec 25, 2025 - 21:52
 0  1.2k
ಚಿತ್ರದುರ್ಗದಲ್ಲಿ ಬಸ್–ಲಾರಿ ಡಿಕ್ಕಿ; ಮದುವೆಗೆ ಮುನ್ನವೇ ಯುವತಿ ಮೃತ್ಯು, ತಾಯಿ ಮಗು ಬಲಿ!
Photo credit: TV09(ಫೋಟೋ: ಮೃತ ಮಾನಸ,ಬಿಂದು ಮತ್ತು ಗ್ರೇಯ)

ಚಿತ್ರದುರ್ಗ, ಡಿ. 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಬುಧವಾರ ನಸುಕಿನಲ್ಲಿ ಖಾಸಗಿ ಸ್ಲೀಪರ್ ಬಸ್‌ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಮೃತರಲ್ಲಿ ಲಾರಿ ಚಾಲಕನೊಬ್ಬ ಹಾಗೂ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಸೇರಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ, ಹಿರಿಯೂರು ಹಾಗೂ ಶಿರಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ನಿದ್ರೆಯಲ್ಲಿದ್ದ ವೇಳೆ ಲಾರಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಪ್ರಯಾಣಿಕರು ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ–ಮಗು ಬಲಿ

ಅಪಘಾತದಲ್ಲಿ ಒಂದೇ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಸಹೋದ್ಯೋಗಿಗಳು ಬೆಂಕಿಗೆ ಸಿಲುಕಿದ್ದು, ಅವರಲ್ಲಿ ಬಿಂದು ಮತ್ತು ಆಕೆಯ ಐದು ವರ್ಷದ ಮಗು ಗ್ರೇಯ ಮೃತಪಟ್ಟಿದ್ದಾರೆ. ಗಾಯಗೊಂಡ ಶಶಾಂಕ್ ಮತ್ತು ಸಂಧ್ಯಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಮದುವೆ ಸಂಭ್ರಮಕ್ಕೆ ಸೂತಕ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಮಾನಸ ಎಂಬ ಯುವತಿಗೆ ಶೀಘ್ರದಲ್ಲೇ ಮದುವೆ ನಿಗದಿಯಾಗಿತ್ತು. ಮದುವೆಗೆ ಸಂಬಂಧಿಸಿದ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಮಾನಸ ಮೃತಪಟ್ಟಿದ್ದಾರೆ. ಇದೇ ಘಟನೆಯಲ್ಲಿ ರಶ್ಮಿ ಮತ್ತು ನವ್ಯಾ ಅವರ ಸಾವೂ ದೃಢಪಟ್ಟಿದೆ.

ಜಿಗಿದು ಪ್ರಾಣ ಉಳಿಸಿಕೊಂಡವರು

ಬಸ್ ಹೊತ್ತಿ ಉರಿಯುತ್ತಿದ್ದಾಗ ಕೆಲ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಬಸ್‌ನಿಂದ ಹೊರಗೆ ಜಿಗಿದ ಪರಿಣಾಮ ಬದುಕುಳಿದಿದ್ದಾರೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 1
Love Love 2
Funny Funny 0
Angry Angry 0
Sad Sad 9
Wow Wow 0