ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗೆ ಕರೆ: ₹1.32 ಕೋಟಿ ರೂಪಾಯಿ ಸುಲಿಗೆ

Oct 30, 2025 - 00:07
 0  393
ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗೆ ಕರೆ: ₹1.32 ಕೋಟಿ ರೂಪಾಯಿ ಸುಲಿಗೆ

ಬೆಂಗಳೂರು, ಅ.29: ಅಧಿಕಾರಿಗಳ ಸೋಗಿನಲ್ಲಿ ಕರೆಮಾಡಿದ ವಂಚಕರು ನಗರ ಉದ್ಯಮಿಯೊಬ್ಬರಿಂದ ₹1.32 ಕೋಟಿ ರೂ. ಕಸಿದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ 56 ವರ್ಷದ ಉದ್ಯಮಿಗೆ ಮುಂಬೈ ಪೊಲೀಸ್ ಹಾಗೂ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಅಧಿಕಾರಿಗಳೆಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಕರೆ ಬಂದಿದೆ. “ನೀವು ಮನಿ ಲಾಂಡರಿಂಗ್ ಮತ್ತು ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಶಂಕಿತರಾಗಿದ್ದೀರಿ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಬೆಂಬಲಿಸಿದ್ದೀರಿ ಹಾಗೂ ಉಗ್ರ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ” ಎಂದು ಆರೋಪಿಸಲಾಗಿದೆ.

‘ಓಂ ಅಬ್ದುಲ್ ಸಲಾಂ’ ಎಂಬಾತನ ಮನೆಯಲ್ಲಿ ನಡೆದ ದಾಳಿಯಲ್ಲಿ ನಿಮ್ಮ ಹೆಸರಿನ ಕೆನರಾ ಬ್ಯಾಂಕ್ ಕಾರ್ಡ್ ಪತ್ತೆಯಾಗಿದೆ. ತನಿಖೆಯಿಂದ ತಪ್ಪಿಸಿಕೊಳ್ಳಲು ನಿಗದಿತ ಖಾತೆಗೆ ಹಣ ವರ್ಗಾಯಿಸಿ; ಪರಿಶೀಲನೆ ಬಳಿಕ ಹಿಂದಿರುಗಿಸಲಾಗುತ್ತದೆ’ ಎಂದು ಭರವಸೆ ನೀಡಿರುವ ವಂಚಕರು, “ಹಣ ನೀಡದಿದ್ದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು” ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. 

ವಿಷಯ ರಹಸ್ಯವಾಗಿರಬೇಕು, ಪತ್ನಿಗಾಗಲೀ ಕುಟುಂಬದವರಿಗಾಗಲೀ ತಿಳಿಸಬಾರದು ಎಂದು ಎಚ್ಚರಿಸಿದ ಆರೋಪಿಗಳ ಮಾತಿಗೆ ನಂಬಿದ ಉದ್ಯಮಿ, ಅಕ್ಟೋಬರ್ 8ರಿಂದ 16ರ ಮಧ್ಯೆ ಆರು ಹಂತಗಳಲ್ಲಿ ₹1.32 ಕೋಟಿ ರೂ. ಆರೋಪಿಗಳ ಖಾತೆಗೆ ವರ್ಗಾಯಿಸಿದ್ದಾರೆ.

ನಂತರ ಸಂಪರ್ಕ ಕಡಿತಗೊಂಡ ಕಾರಣ ವಂಚನೆ ಎಂದು ಮನಗಂಡ ಉದ್ಯಮಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಾವುದೇ ಶಂಕಾಸ್ಪದ ಕರೆಗಳು ಬಂದರೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಹಾಗೂ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0