ಸಿಎಂ ಪರಿಹಾರ ನಿಧಿಗೆ ವಂಚನೆ: ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿ ಹಣ ಪಡೆದ ಆರೋಪಿ ಬಂಧನ

Nov 11, 2025 - 18:54
 0  471
ಸಿಎಂ ಪರಿಹಾರ ನಿಧಿಗೆ ವಂಚನೆ: ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿ ಹಣ ಪಡೆದ ಆರೋಪಿ ಬಂಧನ
Photo credit: TV09 (ಸಾಂದರ್ಭಿಕ ಚಿತ್ರ)

ಬೆಂಗಳೂರು, ನ. 11:ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಡೆಯಲು ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ನೆಲಮಂಗಲದ ಧನಂಜಯ (59) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕ ತರಬೇತಿ ಕೋರ್ಸ್ ಪೂರ್ಣಗೊಳಿಸಿದ್ದ ಈತ, ಯಶವಂತಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸುತ್ತಿದ್ದ. ಅವರ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ನಕಲಿ ಆಸ್ಪತ್ರೆ ಬಿಲ್ಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿಗಳನ್ನು ಸಲ್ಲಿಸಿ ಹಣ ಪಡೆದು ಕಮಿಷನ್ ರೂಪದಲ್ಲಿ ಲಾಭ ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ.

ಪೊಲೀಸರ ತನಿಖೆಯಲ್ಲಿ ಧನಂಜಯ ಒಬ್ಬನೇ ಈ ವಂಚನೆ ನಡೆಸುತ್ತಿರಲಿಲ್ಲ ಎಂಬುದು ಬಹಿರಂಗವಾಗಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಹಾಗೂ ಚಂದ್ರಶೇಖರ್ ಎಂಬ ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಕ್ಯಾತಣ್ಣ ಮತ್ತು ಮತ್ತೊಬ್ಬ ಆರೋಪಿಯು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ವರ್ಷದ ಮೇ ತಿಂಗಳಲ್ಲೇ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಕೆಲವು ಅರ್ಜಿಗಳಲ್ಲಿ ಲೋಪಗಳನ್ನು ಗುರುತಿಸಿದ್ದರೂ ಅದರ ಮೂಲ ಪತ್ತೆಯಾಗಿರಲಿಲ್ಲ. ಆದರೆ ನವೆಂಬರ್ 5ರಂದು ವಿಧಾನದ ಸೌಧದ ಎರಡನೇ ಮಹಡಿಯಲ್ಲಿ ಇರುವ ಮುಖ್ಯಮಂತ್ರಿಯ ಕಚೇರಿಗೆ ಧನಂಜಯ ಹಾಜರಾಗಿ ನಕಲಿ ಅರ್ಜಿಯ ಪಾವತಿ ವಿಳಂಬದ ಬಗ್ಗೆ ವಿಚಾರಿಸಿದಾಗ ಅಧಿಕಾರಿಗಳಿಗೆ ಅನುಮಾನ ಬಂತು. ತಕ್ಷಣವೇ ವಿಧಾನದ ಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿ, ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಂಚನಾ ಜಾಲ ಬಯಲಾಗಿದೆ. 

ಧನಂಜಯ ಹಲವು ಜನರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಹಾಗೂ ಇತರೆ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ, ಅವರಿಗೆ ಪರಿಹಾರ ನಿಧಿ ಸಿಗುವಂತೆ ಸಹಾಯ ಮಾಡುವ ಭರವಸೆ ನೀಡುತ್ತಿದ್ದ. ಹಣ ಬಿಡುಗಡೆಯಾದ ನಂತರ ಪ್ರತಿ ಫಲಾನುಭವಿಯಿಂದ ರೂ. 50 ಸಾವಿರದಷ್ಟು ಕಮಿಷನ್ ಪಡೆಯುತ್ತಿದ್ದ. ಸಂಗ್ರಹಿಸಿದ ಹಣವನ್ನು ತನ್ನ ವೈಯಕ್ತಿಕ ಖರ್ಚುಗಳಿಗೆ ಬಳಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವಿಧಾನದ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0