7.11 ಕೋಟಿ ರೂ. ದರೋಡೆ ನಡೆದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಊಟಕ್ಕೆ ಹೋಗಿದ್ದ CMS ಸಿಬ್ಬಂದಿ!

Nov 25, 2025 - 23:21
 0  650
7.11 ಕೋಟಿ ರೂ. ದರೋಡೆ ನಡೆದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಊಟಕ್ಕೆ ಹೋಗಿದ್ದ CMS ಸಿಬ್ಬಂದಿ!
Photo credit: TV09

ಬೆಂಗಳೂರು, ನ. 25: ನಗರವನ್ನು ನಡುಗಿಸಿದ್ದ 7.11 ಕೋಟಿ ರೂ. ದರೋಡೆ ಪ್ರಕರಣ ತನಿಖೆಯಲ್ಲಿ ಹೊಸ ಸಂಗತಿಗಳು ಹೊರಬಿದ್ದಿದ್ದು, ಘಟನೆಯ ಸಂದರ್ಭದಲ್ಲಿ CMS ವಾಹನದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡದೆ ‘ಊಟಕ್ಕೆ ಹೋಗಿದ್ದೆವು’ ಎಂದು ಪೊಲೀಸರಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸ್ಟೇಷನ್ ಕೂಗಳತೆ ದೂರದಲ್ಲಿದ್ದರೂ ತಕ್ಷಣ ಮಾಹಿತಿ ನೀಡದಿರುವುದು ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದೆ.

ನ.19ರಂದು CMS ಹಣ ಸಾಗಿಸುವ ವಾಹನವನ್ನು ಗ್ಯಾಂಗ್ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ್ದು, ಕಸ್ಟೋಡಿಯನ್ ಹಾಗೂ ಗನ್‌ಮ್ಯಾನ್‌ರನ್ನು ಮಾರ್ಗ ಮಧ್ಯೆ ಇಳಿಸಿ ಕಾರನ್ನು ಕೊಂಡೊಯ್ದಿದ್ದರು. ದರೋಡೆ ನಡೆದ ಸ್ಥಳದಿಂದ ಠಾಣೆ ಅತಿ ಸಮೀಪದಲ್ಲಿದ್ದರೂ ಸಿಬ್ಬಂದಿ ಯಾವುದೇ ಮಾಹಿತಿ ನೀಡದೆ ಊಟಕ್ಕೆ ತೆರಳಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿದೆ.

ದರೋಡೆ ನಡೆದರೂ ಸಿಬ್ಬಂದಿ ಊಟಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ದರೋಡೆ ನಂತರ ಎರಡು ಗಂಟೆಗಳ ಬಳಿಕವೇ ವಿಷಯ ಪೊಲೀಸರಿಗೆ ತಿಳಿದುಬಂದಿದ್ದು, “ಇಷ್ಟೊಂದು ಹೊತ್ತಿನವರೆಗೆ ಏನು ಮಾಡುತ್ತಿದ್ದಿರಿ?” ಎಂದು ವಿಚಾರಿಸಿದಾಗ “ಊಟಕ್ಕೆ ಹೋಗಿದ್ದೆವು” ಎಂದಿರುವುದು ಸಿಬ್ಬಂದಿಯ ನಿಲುವಿನ ಬಗ್ಗೆ ಗಂಭೀರ ಅನುಮಾನ ಮೂಡಿಸಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಸದ್ಯ ಸಿದ್ದಾಪುರ ಠಾಣೆಯಲ್ಲಿ CMS ಕಸ್ಟೋಡಿಯನ್ ಮತ್ತು ಗನ್‌ಮ್ಯಾನ್‌ರನ್ನು ವಿಸ್ತೃತ ವಿಚಾರಣೆ ನಡೆಸಲಾಗುತ್ತಿದೆ. ಅವರು ದರೋಡೆಗೆ ನೇರವಾಗಿ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲವೆಂದು ಆಯುಕ್ತರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದ್ದು, ಇನ್ನೂ ಹಲವು ಅಂಶಗಳು ಬಹಿರಂಗವಾಗುವ ಸಾಧ್ಯತೆ ಪೊಲೀಸರು ಸೂಚಿಸಿದ್ದಾರೆ. 

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮದೊಂದಿಗೆ ಮಾತನಾಡಿ, “ಈವರೆಗೆ 7.01 ಕೋಟಿ ರೂ. ವಶಕ್ಕೆ ಬಂದಿದೆ. ಇದು ಶೇಕಡಾ 98.06ರಷ್ಟು ಹಣ ರಿಕವರಿಯಾದ ಅಪರೂಪದ ಪ್ರಕರಣ,” ಎಂದು ಹೇಳಿದ್ದಾರೆ.

ಈಗಾಗಲೇ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಚೆನ್ನೈ ಹಾಗೂ ಆಂಧ್ರಪ್ರದೇಶ ಪೊಲೀಸರ ಪಾತ್ರವೂ ಮಹತ್ವದ್ದಾಗಿದೆ. ತನಿಖಾ ತಂಡಕ್ಕೆ ನೀಡಲಾಗಿದ್ದ 5 ಲಕ್ಷ ರೂ. ಬಹುಮಾನಕ್ಕೆ ಸೇರಿ ಮತ್ತಷ್ಟು 2 ಲಕ್ಷ ರೂ. ಹೆಚ್ಚುವರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 2
Sad Sad 0
Wow Wow 1