ಕೂಡಿಗೆ ಡಯಟ್ ನಲ್ಲಿ ಯಶಸ್ವಿಗೊಂಡ ವೃತ್ತಿಮೇಳ; ವಿದ್ಯಾರ್ಥಿಗಳ ಗಮನ ಸೆಳೆದ ಪ್ರದರ್ಶನ

ಕೂಡಿಗೆ ಡಯಟ್ ನಲ್ಲಿ ಯಶಸ್ವಿಗೊಂಡ ವೃತ್ತಿಮೇಳ; ವಿದ್ಯಾರ್ಥಿಗಳ ಗಮನ ಸೆಳೆದ ಪ್ರದರ್ಶನ

ಕೂಡಿಗೆ/ಕುಶಾಲನಗರ, ಮಾ.28: ಸಮಗ್ರ ಶಿಕ್ಷಣ-ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ವತಿಯಿಂದ ನನ್ನ ವೃತ್ತಿ ನನ್ನ ಆಯ್ಕೆ" ಎಂಬ ಶೀರ್ಷಿಕೆಯಡಿ ಶುಕ್ರವಾರ ಏರ್ಪಡಿಸಿದ್ದ ಪ್ರಪ್ರಥಮ ಬಾರಿಗೆ ನಡೆದ ಜಿಲ್ಲಾಮಟ್ಟದ ವೃತ್ತಿಪರ ಹಾಗೂ ವೃತ್ತಿ ಮಾರ್ಗದರ್ಶನ ( ಕರಿಯರ್ ) ಮೇಳವು ಯಶಸ್ವಿಯಾಗಿ ನಡೆಯಿತು.

ಈ ವೃತ್ತಿಮೇಳದಲ್ಲಿ ಸರ್ಕಾರಿ ವಿವಿಧ ಇಲಾಖೆಗಳು ಹಾಗೂ ಬ್ಯಾಂಕ್ ಗಳು ಭಾಗವಹಿಸಿದ್ದವು. ತಜ್ಞರಿಂದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ತಿಳುವಳಿಕೆಯ ಮಾಹಿತಿ ನೀಡಲಾಯಿತು. 

ವೃತ್ತಿಮೇಳದ ಸಮಾರೋಪದಲ್ಲಿ ಸ್ವಯಂ ಸೇವಕರು ಹಾಗೂ ಮೇಳದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಡಯಟ್ ಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ರಾಜೇ ಅರಸ್ , ವೃತ್ತಿ ಮೇಳವು ಶಾಲಾ- ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು ಎಂದರು.

 9 ರಿಂದ 12 ನೇ ತರಗತಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳು, ಅವರ ಪೋಷಕರು, ಮಹಿಳೆಯರು ಹಾಗೂ ಸಾರ್ವಜನಿಕರು ಈ ವೃತ್ತಿ ಮೇಳಕ್ಕೆ ಆಗಮಿಸಿ ಇದರ ಪ್ರಯೋಜನ ಪಡೆದುಕೊಂಡಿರುವುದು ವೃತ್ತಿಮೇಳದ‌ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದರು.

 ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ಬ್ಯಾಂಕ್ ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆ (ಸ್ಟಾಲ್)ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಯಿತು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎಚ್.ಎಚ್.ಸತೀಶ್, ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ಆರ್. ಹೇಮಂತರಾಜ್, ಉಪನ್ಯಾಸಕರಾದ ವಿ.ವಿಜಯ್, ಕೆ.ಎಸ್.ನಳಿನಾಕ್ಷಿ, ಜಗದೀಶ್, ಗೀತಾ, ಗಾಯತ್ರಿ, ಬಿ ಆರ್ ಸಿ ಎಂ.ವಿ.ಮಂಜೇಶ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಿಕ್ಷಕರು ಹಾಗೂ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಇದ್ದರು.

 ವೃತ್ತಿಮೇಳದಲ್ಲಿ ಗಮನ ಸೆಳೆದ ಪ್ರದರ್ಶನ; ಈ ವೃತ್ತಿ ಮಾರ್ಗದರ್ಶನ ಮೇಳದ ಮಳಿಗೆಯಲ್ಲಿ ಏರ್ಪಡಿಸಿದ್ದ ಪ್ರದರ್ಶನದ ಲ್ಲಿ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ ಎನ್.ಎಸ್.ಸತೀಶ್ ಅವರ ನೇತೃತ್ವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಿಯೂಸಿ ನಂತರದ ಶಿಕ್ಷಣ ಮಾರ್ಗಗಳು, ಜೊತೆಗೆ ಸಿ.ಇ.ಟಿ, ನೀಟ್, ಜೆ.ಇ.ಇ. ಪರೀಕ್ಷೆ ಮುಂತಾದ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು.

 ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದದ ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ಸ್ ಫ್ರೇಮ್ ವರ್ಕ್ ಘಟಕ (ಎನ್.ಎಸ್.ಕ್ಯೂ.ಎಫ್ )ದ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಹಾಗೂ ತಾಂತ್ರಿಕ ಕೌಶಲ್ಯಾಭಿವೃದ್ಧಿ ಬಗ್ಗೆ ಪ್ರದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಮಡಿಕೇರಿ ಹಾಗೂ ಆಲೂರು ಸಿದ್ದಾಪುರ ಕೈಗಾರಿಕಾ ತರಬೇತಿ ಕೇಂದ್ರ ( ಐ.ಟಿ.ಐ.) ದ ವತಿಯಿಂದ ತೆರೆಯಲಾಗಿದ್ದ ಮಳಿಗೆಯಲ್ಲಿ ವಿವಿಧ ವಿನೂತನ ಮಾದರಿಗಳು/ ಯಾಂತ್ರಿಕ ಸಲಕರಣೆಗಳ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳಿಗೆ ಕೈಗಾರಿಕೆ, ಉದ್ದಿಮೆ ಮತ್ತಿತರ ವೃತ್ತಿ ಕೌಶಲ್ಯಗಳ ಬಗ್ಗೆ‌ ಮಾಹಿತಿ ನೀಡಲಾಯಿತು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ - ಕರ್ನಾಟಕ ಯೋಜನೆಯಡಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕುಗಳ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ವತಿಯಿಂದ ಸಮನ್ವಯ ಶಿಕ್ಷಣ ಕಾರ್ಯಕ್ರಮಗಳು, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಈ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ - ಕರ್ನಾಟಕದ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲಲಾಯಿತು.

ಕೂಡಿಗೆ ಸೈನಿಕ ಶಾಲೆ ಕೊಡಗು ವತಿಯಿಂದ ಸಂಪನ್ಮೂಲ ವ್ಯಕ್ತಿ ಪ್ರಸಾದ್ ಮತ್ತು ವಿದ್ಯಾರ್ಥಿ ಕೆಡೆಟ್ ಗಳು ಸೈನಿಕ ಶಾಲೆಯ ಪ್ರವೇಶ ಹಾಗೂ ಸೇನೆ (ಆರ್ಮಿ )ಯ ವಿವಿಧ ಕೋರ್ಸ್ ಗಳು ಹಾಗೂ ಸೇನೆಯಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ವಿವರ ಮಾಹಿತಿ ನೀಡಿದರು. ಎಸ್ ಬಿ ಐ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಪ್ರದರ್ಶಿಸಿದ ಮಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಂಕ್ ನ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಲಾಯಿತು. ಕುಶಾಲನಗರ ಕನ್ನಡ ಭಾರತಿ ಕಾಲೇಜು ಹಾಗೂ ಅನುಗ್ರಹ ಕಾಲೇಜಿನ ವತಿಯಿಂದ ಉನ್ನತ ಹಾಗೂ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಯಿತು.

 ವೃತ್ತಿಮೇಳದಲ್ಲಿ ಭಾಗವಹಿಸಿದ್ದ ಶಾಲಾ- ಕಾಲೇಜಿನ 600 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮೇಳದ ಪ್ರಯೋಜನ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರದ ಸರಿಯಾದ ವೃತ್ತಿ ಮಾರ್ಗವನ್ನು ಆರಿಸಿಕೊಳ್ಳಲು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗ ಕಂಡುಕೊಳ್ಳಲು ವೃತ್ತಿ ಶಿಕ್ಷಣ ಮತ್ತು ಪ್ರದರ್ಶನ ಮೇಳ ಆಯೋಜನೆ ಮಾಡಿದ್ದು ಬಹಳ ಉಪಯುಕ್ತವಾದುದು ಎಂದು ಮೇಳದಲ್ಲಿ ವೃತ್ತಿಪರ ಕೋರ್ಸ್ ಗಳ ಸಂವಾದ ನಡೆಸಿದ ಜಿಲ್ಲಾ ಲೀಡ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಆರ್.ಕೆ.ಬಾಲಚಂದ್ರ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ವೃತ್ತಿಮೇಳದ ಅಂಗವಾಗಿ ಮಳಿಗೆಗಳಲ್ಲಿ ವಿವಿಧ ಇಲಾಖೆ/ ಸಂಸ್ಥೆಗಳಿಂದ ಏರ್ಪಡಿಸಿರುವ ಪ್ರದರ್ಶನದ ಬಗ್ಗೆ ಸಿಇಓ ಮೀನ ಪ್ರಶಂಸೆ ವ್ಯಕ್ತಪಡಿಸಿದರು.