ಅನ್ನ ಹಾಕಿದ ಮನೆಯನ್ನೇ ಕನ್ನ ಹಾಕಿದ ಕೇರ್‌ಟೇಕರ್‌! : ಮನೆ ಬರೆದುಕೊಟ್ಟಿದ್ದ ಒಡತಿಗೆ ಕೆಲಸದಾಕೆಯಿಂದ ದ್ರೋಹ

ಅನ್ನ ಹಾಕಿದ ಮನೆಯನ್ನೇ ಕನ್ನ ಹಾಕಿದ ಕೇರ್‌ಟೇಕರ್‌! :  ಮನೆ ಬರೆದುಕೊಟ್ಟಿದ್ದ ಒಡತಿಗೆ ಕೆಲಸದಾಕೆಯಿಂದ ದ್ರೋಹ
Photo credit: TV09

ಬೆಂಗಳೂರು, ಅ.30: ನಗರದ ಜೆಪಿ ನಗರದಲ್ಲಿ ವಿಶ್ವಾಸಕ್ಕೆ ಕುತ್ತು ತಂದುಕೊಂಡ ಕೇರ್‌ಟೇಕರ್‌ ಒಬ್ಬಳು ತನ್ನನ್ನೇ ಮಗಳಂತೆ ನೋಡಿಕೊಂಡಿದ್ದ ಮನೆ ಒಡತಿಯ ಮನೆಯಲ್ಲಿಯೇ ಕಳ್ಳತನ ಮಾಡಿದ್ದಾಳೆ. ಆನ್‌ಲೈನ್‌ ಬೆಟ್ಟಿಂಗ್ ಹುಚ್ಚಿಗೆ ಬಲಿಯಾದ ಆಕೆ, ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಜೆಪಿ ನಗರ ಪೊಲೀಸರು ಈ ಸಂಬಂಧ ಆರೋಪಿ ಮಂಗಳ ಎಂಬ ಯುವತಿಯ ಬಳಿಯಿಂದ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ (ಅಂದಾಜು ಮೌಲ್ಯ ರೂ.50 ಲಕ್ಷ) ವಶಪಡಿಸಿಕೊಂಡಿದ್ದಾರೆ.

15 ವರ್ಷಗಳ ನಂಬಿಕೆಗೆ ಕುತ್ತು

ಜೆಪಿ ನಗರದಲ್ಲಿರುವ ಆಶಾ ಜಾಧವ್ (58) ಅವರ ಮನೆಗೆ ಸುಮಾರು 15 ವರ್ಷಗಳ ಹಿಂದೆ ಮಂಗಳ ಕೇರ್‌ಟೇಕರ್‌ ಆಗಿ ಬಂದಿದ್ದಳು. ಆಶಾ ಅವರ ಪತಿ 25 ವರ್ಷಗಳ ಹಿಂದೆ ನಿಧನರಾಗಿದ್ದು, ತಾಯಿಯ ಆರೈಕೆಗೆ ಮಂಗಳನನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು. ಆಕೆಯ ಶ್ರದ್ಧೆ ಮತ್ತು ನಿಷ್ಠೆಯಿಂದ ತೃಪ್ತರಾದ ಆಶಾ, ಮಂಗಳಳನ್ನು ಮಗಳಂತೆ ನೋಡಿಕೊಂಡು, ಹುಟ್ಟುಹಬ್ಬಕ್ಕೆ ವಿದೇಶ ಪ್ರವಾಸಕ್ಕೂ ಕರೆದುಕೊಂಡು ಹೋಗುತ್ತಿದ್ದರು.

ಆಕೆಯ ಮೇಲೆ ಅಪಾರ ನಂಬಿಕೆ ಇಟ್ಟು, ಒಂದೂವರೆ ಕೋಟಿ ರೂ. ಮೌಲ್ಯದ ಮನೆಯನ್ನು ವಿಲ್ ಮೂಲಕ ಮಂಗಳ ಹೆಸರಿಗೆ ಬರೆದು ಕೊಟ್ಟಿದ್ದರು. ತಾಯಿಯ ನಿಧನದ ಬಳಿಕವೂ ಮಂಗಳ ಆಶಾ ಅವರ ಜೊತೆ ವಾಸಿಸುತ್ತಿದ್ದಳು.

ಬೆಟ್ಟಿಂಗ್ ಚಟದಿಂದ ನಾಶವಾದ ಬದುಕು

ಆದರೆ ಕೆಲ ವರ್ಷಗಳ ಹಿಂದೆ ಮಂಗಳ ಆನ್‌ಲೈನ್‌ ಬೆಟ್ಟಿಂಗ್, ಪಾರ್ಟಿ ಮತ್ತು ಪಬ್ಬು ಚಟಕ್ಕೆ ಒಳಗಾಗಿ ಸಾಲಗಳಲ್ಲಿ ಮುಳುಗಿದಳು. ಸುಮಾರು 40 ಲಕ್ಷ ರೂ. ಸಾಲ ತೀರಿಸಲು ಆಶಾ ಅವರೇ ಸಹಾಯ ಮಾಡಿದ್ದರು. ಇಷ್ಟು ಮಾಡಿದರೂ ಮಂಗಳ ತನ್ನ ಕೆಟ್ಟ ಚಟ ಬಿಡದೆ ಮತ್ತೆ ಹಣಕ್ಕಾಗಿ ಕನ್ನ ಹಾಕುವ ಯೋಚನೆ ಮಾಡಿದ್ದಳು.

ಮನೆಯ ಬೀರಿನ ಮೂಲ ಕೀ ಬಳಸಿ 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ಕಳ್ಳತನ ಮಾಡಿ ಕೀಯನ್ನು ಯಾರಿಗೂ ಸಿಕ್ಕದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು.

ದೀಪಾವಳಿ ವೇಳೆ ಬಯಲಾದ ಕಳ್ಳತನ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಶಾ ನಕಲಿ ಕೀ ಬಳಸಿ ಬೀರು ತೆಗೆಯುವಾಗ ಚಿನ್ನ ಕಳ್ಳತನವಾಗಿರುವುದು ಗೊತ್ತಾಯಿತು. ಮೊದಲು ಆಶಾ ಅಪರಿಚಿತರ ವಿರುದ್ಧ ದೂರು ನೀಡಿದರೂ, ಪೊಲೀಸರು ಮಂಗಳನ ಸಿಡಿಆರ್ ಪರಿಶೀಲನೆ ನಡೆಸಿ ಚಿನ್ನ ಅಡಮಾನ ಇಟ್ಟಿದ್ದ ಸುಳಿವು ಪತ್ತೆಹಚ್ಚಿದರು. ವಿಚಾರಣೆ ವೇಳೆ ಮಂಗಳ ತಪ್ಪೊಪ್ಪಿಕೊಂಡಳು.ಎ ಫ್‌ಐಆರ್ ದಾಖಲಿಸಿದ ಪೊಲೀಸರು ಮಂಗಳನನ್ನು ಬಂಧಿಸಿದರು.

ಈ ಘಟನೆ ಬಳಿಕ ಆಶಾ ಜಾಧವ್ ಮಂಗಳ ಹೆಸರಿಗೆ ಮಾಡಿದ್ದ ಐದು ಕೋಟಿ ರೂ. ಮೌಲ್ಯದ ವಿಲ್ ರದ್ದುಪಡಿಸಿದ್ದಾರೆ. ಮಂಗಳನಿಗೆ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಬೇಕೆಂಬ ಆಶಾ ಅವರ ಕನಸು ನುಚ್ಚುನೂರಾಗಿದೆ.

15 ವರ್ಷಗಳ ವಿಶ್ವಾಸ, ಪ್ರೀತಿ, ಮಮತೆಯನ್ನೆಲ್ಲಾ ಆನ್‌ಲೈನ್‌ ಬೆಟ್ಟಿಂಗ್ ಮತ್ತು ದುರಾಸೆ ಹಾಳುಮಾಡಿವೆ. ಅನ್ನ ಹಾಕಿದ ಮನೆಯನ್ನೇ ಕನ್ನ ಹಾಕಿದ ಮಂಗಳ ಈಗ ಜೆಪಿ ನಗರ ಪೊಲೀಸರ ಬಂಧನದಲ್ಲಿದ್ದಾಳೆ ಎಂದು ತಿಳಿದು ಬಂದಿದೆ.