ಚಿಕ್ಕಮಗಳೂರು | ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ

ಚಿಕ್ಕಮಗಳೂರು | ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ
Photo credit: TV09 (ಫೋಟೋ:ಕೊಲೆಯಾದ ಸಂಧ್ಯಾ)

ಚಿಕ್ಕಮಗಳೂರು, ಡಿ. 04: ಅರೇನೂರು ಗ್ರಾಮದಲ್ಲಿ ಮೂವರು ಮಕ್ಕಳ ತಾಯಿಯೊಬ್ಬರನ್ನು ಭೀಕರ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಹಿಂಭಾಗದಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂಧ್ಯಾ (32) ಎಂಬ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಅರೇನೂರು ಮೂಲದ ಸಂಧ್ಯಾ, ಶಿರಗೋಳ ಗ್ರಾಮಕ್ಕೆ ಸೇರಿದ ರವಿ ಎಂಬುವವರೊಂದಿಗೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಮೂವರು ಮಕ್ಕಳು ಹುಟ್ಟಿದ್ದರು. ಆದರೆ ವಿವಾಹ ಜೀವನದಲ್ಲಿ ಉಂಟಾದ ಕಲಹದ ಹಿನ್ನೆಲೆಯಲ್ಲಿ ಸಂಧ್ಯಾ ಮೂರು ವರ್ಷಗಳಿಂದ ತಾಯಿಮನೆ ಸೇರಿ ವಾಸವಾಗಿದ್ದರು. ಈ ಅವಧಿಯಲ್ಲಿ ಕಾಫಿ ತೋಟದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಇತ್ತೀಚೆಗೆ ಸಂಧ್ಯಾ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆ ಆಲ್ದೂರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ನಡುವೆ ಸೋಮವಾರ ಸಂಜೆ ಸಂಧ್ಯಾ ಮನೆಗೆ ಹಿಂದಿರುಗಿ, ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದರು.

ಆದರೆ ಮಂಗಳವಾರ ಬೆಳಗ್ಗೆ ಘಟನೆ ಭೀಕರ ತಿರುವು ಪಡೆದಿದೆ. ಮನೆಯ ಹಿಂಭಾಗದಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಸಂಧ್ಯಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಲಾಗಿದ್ದು, ಗಾಯದ ತೀವ್ರತೆಗೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.

ಸಂಧ್ಯಾ ಅವರ ಕೊಲೆಗೆ ಪ್ರೇಮ ವೈಮನಸ್ಸೇ ಕಾರಣವಾಗಿರಬಹುದೆಂಬ ಶಂಕಿಸಲಾಗಿದೆ. ಮನೆಯ ಹತ್ತಿರದ ಸಂಬಂಧಿಯೊಬ್ಬರೊಂದಿಗೆ ಸಂಧ್ಯಾಗೆ ಪ್ರೇಮ ಸಂಬಂಧವಿತ್ತು ಎಂದು ಮೂಲಗಳು ತಿಳಿಸಿವೆ. ಗಂಡನಿಂದ ದೂರವಿದ್ದ ಸಂಧ್ಯಾ ಮರುಮದುವೆಯ ಯೋಚನೆ ಮಾಡಿದ್ದರೆಂಬ ಮಾಹಿತಿಯಿದೆ. ಈ ಸಂಬಂಧಕ್ಕೆ ಕುಟುಂಬದ ತೀವ್ರ ವಿರೋಧವಿತ್ತು ಎನ್ನಲಾಗಿದೆ. 

ಘಟನೆ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಎರಡು ವಿಶೇಷ ತಂಡಗಳನ್ನು ರಚಿಸಿ ಶೋಧ ಆರಂಭಿಸಲಾಗಿದೆ.