ಚಿಕ್ಕಮಗಳೂರು: ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ

Nov 30, 2025 - 13:09
 0  1.5k
ಚಿಕ್ಕಮಗಳೂರು: ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ
Photo credit: TV09

ಚಿಕ್ಕಮಗಳೂರು, ನ. 30: ತರೀಕೆರೆ ತಾಲೂಕಿನ ಜನವಸತಿ ಪ್ರದೇಶಗಳಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಚಿರತೆ, ಅರಣ್ಯ ಇಲಾಖೆಯ ವಿಶೇಷ ಕಾರ್ಯಾಚರಣೆಯ ವೇಳೆ ಗುಂಡೇಟಿಗೆ ಸಾವನ್ನಪ್ಪಿದೆ. ಇತ್ತೀಚೆಗೆ ಈ ಚಿರತೆಯ ದಾಳಿಗೆ ಐದು ವರ್ಷದ ಬಾಲಕಿ ಸಾನ್ವಿ ಬಲಿಯಾದರೆ, ಮತ್ತೊಬ್ಬ 11 ವರ್ಷದ ಬಾಲಕ ಹೃದಯ್ ಗಂಭೀರವಾಗಿ ಗಾಯಗೊಂಡಿದ್ದನು.

ನವಿಲೇಕಲ್ಲು ಗುಡ್ಡದ ಬಳಿ ಕಾರ್ಮಿಕರ ಸಾಲಿನ ಮನೆಗಳ ಹಿಂಭಾಗದಲ್ಲಿ ಆಟವಾಡುತ್ತಿದ್ದ ಸಾನ್ವಿಯನ್ನು ಚಿರತೆ ತಂದೆಯ ಕಣ್ಣೆದುರೇ ಎಳೆದುಕೊಂಡು ಹೋಗಿ ಕೊಂದು ಹಾಕಿದ ಘಟನೆ ಸ್ಥಳೀಯರಲ್ಲಿ ಅತೀವ ಆತಂಕ ಮೂಡಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ, ಬೈರಾಪುರದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಹೃದಯ್ ಮೇಲೆ ಚಿರತೆ ದಾಳಿ ನಡೆಸಿ ಕತ್ತಿನ ಭಾಗಕ್ಕೆ ಬಾಯಿ ಹಾಕಿ ಎಳೆದುಕೊಂಡು ಹೋಗಲು ಯತ್ನಿಸಿತ್ತು. ಬಾಲಕ ಅದೃಷ್ಟವಶಾತ್ ಪಾರಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ದಾಳಿಕೋರ ಚಿರತೆಯನ್ನು ಸೆರೆಹಿಡಿಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕುಮ್ಕಿ ಆನೆಗಳನ್ನು ತರೀಕೆರೆಗೆ ಕರೆಸಲಾಗಿದ್ದು, ನವಿಲೇಕಲ್ಲು ಗುಡ್ಡ–ಬೈರಾಪುರ ಸುತ್ತಮುತ್ತ 10ಕ್ಕೂ ಹೆಚ್ಚು ಬೋನುಗಳನ್ನು ಅಳವಡಿಸಲಾಗಿತ್ತು. ಆದರೆ ಬೋನಿಗೆ ಬೀಳದ ಚಿರತೆ ನಿರಂತರ ಓಡಾಡಿ ಭಯ ಸೃಷ್ಟಿಸುತ್ತಿತ್ತು.

ಶನಿವಾರ ಬೈರಾಪುರ ಗ್ರಾಮದ ಹೊರವಲಯದ ಪಾಳು ಬಿದ್ದ ಲೈನ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಗುರುತಿಸಿದ ಅರಣ್ಯ ಸಿಬ್ಬಂದಿ, ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಇದೇ ವೇಳೆ ಚಿರತೆ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಮುಂದಾದಾಗ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದ್ದು, ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1