ಕೆಂಪೇಗೌಡ ಜಯಂತಿ ವೇಳೆ ಗಲಾಟೆ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ, ನಾಲ್ವರ ಬಂಧನ

Jun 28, 2026 - 12:47
Jun 28, 2026 - 13:06
 0  458
ಕೆಂಪೇಗೌಡ ಜಯಂತಿ ವೇಳೆ ಗಲಾಟೆ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ, ನಾಲ್ವರ ಬಂಧನ

ಚಿಕ್ಕಬಳ್ಳಾಪುರ, ಜೂನ್ 28: ನಗರದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಶುಕ್ರವಾರ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಜೆಡಿಎಸ್ ಕಾರ್ಯಕರ್ತರು ವೇದಿಕೆಯಿಂದ ಶಾಸಕರನ್ನು ಕೆಳಗಿಳಿಸಬೇಕು ಎಂದು ಘೋಷಣೆ ಕೂಗಿ ಗಲಾಟೆ ಮಾಡಿದರು. ಸ್ವಾಮೀಜಿಯವರ ಮಧ್ಯಪ್ರವೇಶದಿಂದ ಕಾರ್ಯಕ್ರಮ ಮುಂದುವರಿಯಿತು.

ಕಾರ್ಯಕ್ರಮ ಮುಗಿದ ಬಳಿಕ ಶಾಸಕ ಪ್ರದೀಪ್ ಈಶ್ವರ್ ಕಾರಿನ ಸನ್‌ರೂಫ್ ಮೂಲಕ ಹೊರಬಂದು ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ, ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರಿಗೆ ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದರು. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ಚಪ್ಪಲಿ ಎಸೆದಿದ್ದಾರೆ.

ಸುಮೊಟೊ ಕೇಸ್ ದಾಖಲು: ಶಾಸಕರ ಮೇಲೆ ಹಲ್ಲೆ, ಅವಾಚ್ಯ ನಿಂದನೆ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ನಗರ ಠಾಣೆ ಪಿಎಸ್‌ಐ ಅಮರ್ ಸುಮೊಟೊ ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಟಿವಿ ಆಧರಿಸಿ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್, ಮಹೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಠಾಣೆ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ: "ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಈ ಘಟನೆ ತೀವ್ರ ಬೇಸರ ತರಿಸಿದೆ. ನಾಲ್ವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ವಾಗ್ದಾಳಿ: "ಶಾಸಕರ ಮೇಲೆ ಚಪ್ಪಲಿ ಎಸೆಯುವುದು ಸರಿಯಲ್ಲ. ಯಾರೇ ಆಗಲಿ ಪ್ರಚೋದನೆ ನೀಡುವುದು ತಪ್ಪು. ಜೆಡಿಎಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಶುರುವಾಗಿದೆ. 12 ಶಾಸಕರು ಅಡ್ಡಮತದಾನ ಮಾಡಿರುವುದು ನಾಯಕತ್ವದ ಕೊರತೆ ತೋರಿಸುತ್ತದೆ. ಆರ್. ಅಶೋಕ್, ವಿಜಯೇಂದ್ರ ರಾಜೀನಾಮೆ ನೀಡಬೇಕು" ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0