ವಿವಿಧ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳಿಂದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಅಭಿನಂದನೆ

ವಿವಿಧ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳಿಂದ  ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಅಭಿನಂದನೆ

ಮಡಿಕೇರಿ ಡಿ.26:-ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೊಡಗಿನ ಜಮ್ಮಾ ಭೂಮಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ ಕಾಯ್ದೆ ರೂಪಕ್ಕೆ ಜಾರಿಗೊಳಿಸುವಲ್ಲಿ ಶ್ರಮಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ಗೌಡ ಅವರನ್ನು ಶುಕ್ರವಾರ ಅಭಿನಂದಿಸಲಾಯಿತು. 

      ನಗರದ ಲಯನ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶಾಲೂ, ಫಲ ತಾಂಬೂಲ, ನೀಡಿ ಗೌರವಿಸಿ, ಸನ್ಮಾನಿಸಿದರು.  

      ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮಂತರ್ ಗೌಡ ಅವರು ಕೊಡಗು ಜಿಲ್ಲೆಯ ಕೃಷಿಕರಲ್ಲಿ ನೂರಾರು ವರ್ಷಗಳಲ್ಲಿ ಕಾಡಿದ್ದ ಜಮ್ಮಾ ಬಾಣೆ ಸಮಸ್ಯೆಯನ್ನು ಒಂದು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸಲಾಗಿದೆ ಎಂದು ಹೇಳಿದರು. 

      ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ನಿರಂತರ ಪ್ರಯತ್ನ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಈ ಸಂಬಂಧ ಹಲವು ಬಾರಿ ಸಭೆ ನಡೆಸಿ ಸದನಕ್ಕೆ ಮಂಡಿಸುವ ಮೂಲಕ ಜಮ್ಮಾ ಬಾಣೆ ಸಮಸ್ಯೆಯನ್ನು ಕಾಯ್ದೆರೂಪಕ್ಕೆ ಜಾರಿಗೊಳಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು. 

      ಕೊಡಗು ಜಿಲ್ಲೆಯ ಕೃಷಿಕರ ಅನುಕೂಲಕ್ಕಾಗಿ ಜಮ್ಮಾ ಬಾಣೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶ್ರಮಿಸಲಾಗಿದೆ. ಕೃಷಿಕರು ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯ ಪಡೆಯಲು, ಬೆಳೆ ವಿಮೆ, ಬೆಳೆ ಹಾನಿ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಆಯಾಯ ತೋಟದ ಮಾಲೀಕರಿಗೆ ಆರ್‍ಟಿಸಿ ಮಾಡಿಕೊಡಲು ಈ ಕಾಯ್ದೆ ಅನುಕೂಲವಾಗಲಿದೆ ಎಂದು ಹೇಳಿದರು. 

       ಕೊಡಗು ಜಿಲ್ಲೆಯಲ್ಲಿ ಪಟ್ಟೆದಾರರ ಹೆಸರಿನಲ್ಲಿ ಭೂಮಿ ಇದೆ. ಆದರೆ ಅವರ ಕುಟುಂಬದವರು ತೋಟವನ್ನು ಅನುಭವಿಸಿಕೊಂಡು ಬರುತ್ತಾರೆ. ಆದರೆ ಆರ್‍ಟಿಸಿ ಇಲ್ಲದೆ ಸೌಲಭ್ಯ ಪಡೆಯುವುದು ಕಷ್ಟವಾಗಿದೆ. ಜಮ್ಮಾಬಾಣೆ ಕಾಯ್ದೆ ತಿದ್ದುಪಡಿಯಿಂದ ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಸ್ವತಂತ್ರ ಭೂಮಿ ಹಕ್ಕು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.  

        ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಒಳಿತು ಕೆಡುಕು ಇರುತ್ತದೆ. ಆದರೆ ಭೂಮಿ ಮಾರಿಕೊಳ್ಳದೆ ಭೂಮಿಯನ್ನು ಉಳಿಸಿಕೊಳ್ಳಬೇಕು. ಪ್ರತಿ ಕ್ಷೇತ್ರದಲ್ಲೂ ಕೆಲವು ಲೋಪದೋಷಗಳು ಇದ್ದು, ಅದನ್ನು ಸರಿಪಡಿಸಲು ಮುಂದಾಗಲಾಗಿದೆ. ಇದರಿಂದ ಸಣ್ಣ ಕೃಷಿಕರಿಗೆ ಅನುಕೂಲವಾಗಿದೆ ಎಂದರು. 

        ಭೂ ಕಾಯ್ದೆ ತಿದ್ದುಪಡಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಪಕ್ಷಾತೀತವಾಗಿ ಎಲ್ಲರೂ ಸಹಕರಿಸಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ಸ್ಮರಿಸಿದರು. 

        ‘ಕೊಡಗು ಜಿಲ್ಲೆಯಲ್ಲಿ ಜಮ್ಮಾ ಭೂಮಿಗೆ ಸಂಬಂಧಿಸಿದಂತೆ ಎಷ್ಟೋ ವರ್ಷಗಳಿಂದ ಸರ್ವೇ ಕಾರ್ಯ ಆಗಿಲ್ಲ. ಆದ್ದರಿಂದ ಮರು ಸರ್ವೆ ಮಾಡಿ ಗಡಿಯನ್ನು ಗುರುತಿಸುವುದು ಅತ್ಯಗತ್ಯ ಎಂದು ಡಾ.ಮಂತರ್‍ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’

        ಜೊತೆಗೆ ಸಿ ಮತ್ತು ಡಿ ಭೂಮಿಯ ಸಮಸ್ಯೆಯನ್ನು ಸಹ ಪರಿಹರಿಸಲು ಪ್ರಯತ್ನಿಸಲಾಗುವುದು. ರೈತರ ಪರವಾಗಿ ಸದಾ ಕೆಲಸ ಮಾಡಲು ಸಿದ್ದವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಹೀಗೆ ಎಲ್ಲರ ಸಹಕಾರದಿಂದ ನಾವು ರೈತರ ಜೊತೆಗಿದ್ದೇವೆ ಎಂದರು. 

       ಶಾಸಕಾಂಗದ ಮೂಲಕ ಕಾಯ್ದೆ, ಕಾನೂನನ್ನು ಜಾರಿಗೊಳಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಪಾಲಿಸುವುದು ಅತೀ ಮುಖ್ಯ ಎಂದರು. 

       ಪ್ರಮುಖರಾದ ಟಿ.ಪಿ.ರಮೇಶ್ ಅವರು ಮಾತನಾಡಿ ರಾಜ್ಯದಲ್ಲಿ ಜಾರಿಗೊಂಡ ಏಕರೂಪ ಭೂ ಕಾಯ್ದೆ ಕೊಡಗು ಜಿಲ್ಲೆಯಲ್ಲಿ ಜಾರಿಗೊಂಡಿರಲಿಲ್ಲ. ಹಾಗಾಗಿ ಸಮಸ್ಯೆಯಾಗಿ ಉಳಿದಿತ್ತು ಎಂದು ಸ್ಮರಿಸಿದರು. 

       ಕೊಡಗು ಜಮ್ಮಾ ಹಿಡುವಳಿದಾರರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗುವಲ್ಲಿ ಜಿಲ್ಲೆಯ ಶಾಸಕರು ದೊಡ್ಡ ಕಾಣಿಕೆ ನೀಡಿದ್ದು, ಹೊಸ ಚೈತನ್ಯ ತುಂಬಿದ್ದಾರೆ ಎಂದು ಹೇಳಿದರು. 

        ವಕೀಲರಾದ ಎಂ.ಎ.ನಿರಂಜನ ಅವರು ಮಾತನಾಡಿ ಜಮ್ಮಾ ಭೂಮಿ ಇಂದಿಗೂ ಸಹ ಕುಟುಂಬದ ಪಟ್ಟೆದಾರರ ಹೆಸರಿನಲ್ಲಿದೆ. ಬಹಳ ಕಾಲದಿಂದಲೂ ಜಟಿಲವಾಗಿದ್ದ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕರು ಶ್ರಮಿಸಿದ್ದಾರೆ ಎಂದರು. 

        ‘ಜಮ್ಮಾ ಬಾಣೆ ಭೂಮಿ ಸಂಬಂಧ ಹೊಸ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಕೆಎಎಸ್ ದರ್ಜೆಯ ವಿಶೇಷ ಕಂದಾಯ ಅಧಿಕಾರಿಯನ್ನು ನಿಯೋಜಿಸುವಂತಾಗಬೇಕು ಎಂದು ಎಂ.ಎ.ನಿರಂಜನ ಅವರು ಸಲಹೆ ಮಾಡಿದರು.’ 

       ‘ಭೂ ಮಾಲೀಕತ್ವದ ಸಂಬಂಧ ಭೂಮಿ ಅನುಭವಿಸುತ್ತಿರುವ ಕುಟುಂಬಗಳು ಪಾಲು ಮಾಡಿಕೊಳ್ಳಬಹುದು. ಆದರೆ ಮಾಲೀಕತ್ವ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಲಹೆ ಮಾಡಿದರು.’ 

        ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ತೇನನ ರಾಜೇಶ್ ಅವರು ಮಾತನಾಡಿ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿದೇಯಕ ಜಾರಿಗೊಳಿಸುವಲ್ಲಿ ಶಾಸಕರು ಶ್ರಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಸಣ್ಣ ಸಣ್ಣ ಕೃಷಿಕರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

        ಪ್ರಮುಖರಾದ ತೆನ್ನಿರಾ ಮೈನಾ ಅವರು ಮಾತನಾಡಿ ಕೊಡಗಿನ ಜ್ವಲಂತ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕದ್ವಯರು ಶ್ರಮಿಸಿದ್ದಾರೆ. ನೂರಾರು ವರ್ಷಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನಿಸಿದ್ದಾರೆ ಎಂದರು. 

       ಪ್ರಮುಖರಾದ ಚುಮ್ಮಿ ದೇವಯ್ಯ ಅವರು ಮಾತನಾಡಿ ತೋಟದ ಮಾಲೀಕರ ಹೆಸರಿಗೆ ಕಂದಾಯ ನಿಗಧಿಯಾಗಬೇಕು. ಆ ನಿಟ್ಟಿನಲ್ಲಿ ಈ ಕಾಯ್ದೆ ಜಾರಿಗೊಳಿಸಿರುವುದು ಸಹಕಾರಿಯಾಗಿದೆ ಎಂದರು. 

        ಕೂರ್ಗ್ ಪ್ಲಾಂಟೇಶನ್ ಅಸೋಷಿಯೇಷನ್‍ನ ನಂದ ಬೆಳ್ಯಪ್ಪ ಅವರು ಮಾತನಾಡಿ ಕರ್ನಾಟಕ ಭೂ ಕಂದಾಯ ಜಾರಿಗೊಳಿಸಿರುವುದರಿಂದ ಕೊಡಗು ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗಿದೆ. ಹಲವು ವರ್ಷಗಳ ಸಮಸ್ಯೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿರುವುದು ಶ್ಲಾಘನೀಯ ಎಂದರು. 

        ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಪ್ರಮುಖರಾದ ಜಿ.ಚಿದ್ವಿಲಾಸ್, ಪ್ರಕಾಶ್ ಆಚಾರ್ಯ, ಹಂಸ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರಾದ ಕೆ.ಎ.ದೇವಯ್ಯ, ಅಂಬೆಕಲ್ಲು ನವೀನ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಭಿಮಾನಿಗಳು ಇತರರು ಇದ್ದರು.