ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ; ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ

Apr 18, 2026 - 14:41
 0  211
ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ;  ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೂರಿದ್ದು ಇದರಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ನಾಗರೀಕರು ನಾಪೋಕ್ಲು ಚೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ನಾಪೋಕ್ಲು ಚೆಸ್ಕಾಂ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ನಾಗರಿಕರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತಾರಾಟೆಗೆ ತೆಗೆದುಕೊಂಡರು. ಈ ಸಂದರ್ಭ ನಾಪೋಕ್ಲುವಿನ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರು ಮಾತನಾಡಿ ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ನಾಗರಿಕರು ಕಂಗಾಲಾಗಿದ್ದಾರೆ.

ಈ ವ್ಯಾಪ್ತಿಯಲ್ಲಿ ವಿದ್ಯುತ್ ಫೀಡರ್ ನಲ್ಲಿ ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಉಂಟಾಗಲಿದೆ ಎಂದು ಇಲಾಖೆ ಪ್ರಕಟಣೆ ನೀಡಲಾಗುತ್ತಿದೆ. ಆದರೂ ರಾತ್ರಿಯಿಂದ ಮುಂಜಾನೆವರೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ.ಅಲ್ಲದೆ ಉಳಿದ ದಿನಗಳಲ್ಲಿಯೂ ವಿದ್ಯುತ್ ವ್ಯತ್ಯೆಯ ಉಂಟಾಗುತ್ತಿದೆ.ಈ ಸಮಯದಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ಅಂಬಿ ಕಾರ್ಯಪ್ಪ ಪ್ರಶ್ನಿಸಿದರು.

ನಿರಂತರ ವಿದ್ಯುತ್ ಸಮಸ್ಯೆಯಿಂದ ಪಟ್ಟಣದಲ್ಲಿರುವ ವ್ಯಾಪಾರ ಮಾರಾಟ ಮಳಿಗೆ ಸೇರಿದಂತೆ ಇನ್ನಿತರ ಮಳಿಗೆಯ ವರ್ತಕರಿಗೂ ಸಮಸ್ಯೆ ಯಾಗಿದೆ.ಇದರಿಂದ ವಿದ್ಯಾರ್ಥಿಗಳ ಕಲಿಕೆಗೂ ತೊಂದರೆಯಾಗುತ್ತಿದೆ. ದೊಡ್ಡ ಹೋಬಳಿಯನ್ನು ಹೊಂದಿರುವ ನಾಪೋಕ್ಲುವಿಗೆ ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯುತ್ ತುರ್ತು ಸಂದರ್ಭಗಳಲ್ಲಿ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು.ಮುಂದಿನ 15ದಿನದೊಳಗೆ ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಂಬಿಕಾರ್ಯಪ್ಪ ಎಚ್ಚರಿಕೆ ನೀಡಿದರು.

ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರ ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವಂತ್ತಾಗಿದೆ.ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಜಾಲ ಬಲವರ್ಧನೆ ಕಾಮಗಾರಿ ವೇಳೆ ವಿದ್ಯುತ್ ಕಡಿತಗೊಳಿಸಲಿ. ಆದರೆ ರಾತ್ರಿ ಸಮಯ ವಿದ್ಯುತ್ ಕಡಿತಗೊಳಿಸಿ ಜನರಿಗೆ ಸಮಸ್ಯೆ ಉಂಟುಮಾಡುವುದು ಸರಿಯಲ್ಲ. ಇದರಿಂದ ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ವಿದ್ಯುತ್ ಸಮಸ್ಯೆ ಸರಿಪಡಿಸಬೇಕೆಂದು ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ಕಂಗಂಡ ಜಾಲಿ ಪೂವಪ್ಪ, ಮುಕ್ಕಾಟಿರ ವಿನಯ್ ಮತ್ತಿತರರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್ ಕುಮಾರ್ ಪ್ರತಿಕ್ರಯಿಸಿ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಜಾಲ ಬಲವರ್ಧನೆ ಕಾಮಗಾರಿ ಪೂರ್ಣಗೊಂಡಿದೆ.

ಮುಂದಿನ 10ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವ ಭರವಸೆ ನೀಡಿದರು.ಇಲ್ಲಿನ ಕಚೇರಿಯಲ್ಲಿ 5 ಸಿಬ್ಬಂದಿಗಳಿದ್ದು ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭ ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ಕನ್ನಂಭಿರ ಸುದಿ ತಿಮ್ಮಯ್ಯ, ಕಿಶೋರ್ ಬೋಪಣ್ಣ, ಚಿಯಕ್ ಪೂವಂಡ ಸತೀಶ್, ಡಾಲಿ ಅಚ್ಚಪ್ಪ, ಕುಂದ್ಯೋಳಂಡ ಜತ್ತಿ, ಪಾಲಚಂಡ ಸೀಮ, ಅರೆಯಡ ಅಶೋಕ್, ಬಾಳೆಯಡ ಮಧು, ಕುಲ್ಲೇಟಿರ ಅಜಿತ್ ನಾಣಯ್ಯ, ಪಟ್ರಪಂಡ ನಿರನ್, ಬಿದ್ದಾಟಂಡ ಕವಿನ್,ಟಿ. ಕೆ. ಸುಕುಮಾರ್, ಅಯ್ಯಪ್ಪ, ಮುತ್ತಣ್ಣ, ಕಿಶೋರ್ ಬೋಪಣ್ಣ, ಪ್ರಸಾದ್, ನಾಪೋಕ್ಲು ಚೆಸ್ಕಾಂ ಅಭಿಯಂತರ ಹರೀಶ್,ಸೇರಿದಂತೆ ನಾಪೋಕ್ಲು ವಿಭಾಗದ ಮತ್ತಿತರ ಪ್ರಮುಖರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0