ಸಂತ್ರಸ್ತರಿಗೆ ಪರಿಹಾರ ಪಾವತಿಸದ ಇಲಾಖೆಗೆ ನ್ಯಾಯಾಲಯದ ಕಠಿಣ ಕ್ರಮ; ಸರ್ಕಾರಿ ಬಸ್ ಜಪ್ತಿ

Dec 5, 2025 - 11:45
 0  684
ಸಂತ್ರಸ್ತರಿಗೆ ಪರಿಹಾರ ಪಾವತಿಸದ ಇಲಾಖೆಗೆ ನ್ಯಾಯಾಲಯದ ಕಠಿಣ ಕ್ರಮ; ಸರ್ಕಾರಿ ಬಸ್ ಜಪ್ತಿ
Photo credit: Etv bharath

ಗಂಗಾವತಿ: ರಸ್ತೆ ಅಪಘಾತದಲ್ಲಿ ಇಬ್ಬರು ಬಲಿಯಾದ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬಕ್ಕೆ ನೀಡಬೇಕಾಗಿದ್ದ ಪರಿಹಾರ ಮೊತ್ತ ಪಾವತಿಸಲಾಗದೆ ವರ್ಷಗಳು ಕಳೆದ ಹಿನ್ನೆಲೆಯಲ್ಲಿ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದ ಮೇರೆಗೆ ಹೊಸಪೇಟೆ ವಿಭಾಗದ ಸರ್ಕಾರಿ ಬಸ್‌ವೊಂದನ್ನು ಗುರುವಾರ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.

ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್‌ ಅನ್ನು ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರ ತಂಡ ತಡೆದು ಜಪ್ತಿ ಮಾಡಿ ಬಳಿಕ ನ್ಯಾಯಾಲಯದ ವಶಕ್ಕೆ ಒಪ್ಪಿಸುವ ಮೂಲಕ ಇಲಾಖೆಗೆ ಗಂಭೀರ ಎಚ್ಚರಿಕೆಯ ಸಂದೇಶ ನೀಡಲಾಗಿದೆ.

2019ರ ನವೆಂಬರ್ 28ರಂದು ಗಂಗಾವತಿಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಬಸ್ ಕಡೇಬಾಗಿಲು ಸೇತುವೆ ಸಮೀಪ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಪರಿಣಾಮ, ಶಿಕ್ಷಣ ಇಲಾಖೆಯ ಸಿಬ್ಬಂದಿ ಮೊಹಮ್ಮದ್ ಸಲಾವುದ್ದೀನ್ ಆಯುಬಿ ಮತ್ತು ನಿಖಾತ್ ಬೇಗಂ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿಯಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರಾದ ಸದಾನಂದ ನಾಯ್ಕ್, 2025ರ ಜುಲೈ 25ರೊಳಗೆ ಸಂತ್ರಸ್ತರ ಕುಟುಂಬಕ್ಕೆ ₹55.72 ಲಕ್ಷ ಪರಿಹಾರ ಪಾವತಿಸಲು ಸಾರಿಗೆ ಇಲಾಖೆಗೆ ಆದೇಶಿಸಿದ್ದರು. ಆದರೆ ಇಲಾಖೆಯು ನೀಡಿದ ಗಡುವಿನೊಳಗೆ ಪರಿಹಾರ ಪಾವತಿಸದೆ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಪ್ತಿ ಕ್ರಮಕ್ಕೆ ಮುಂದಾಗಿದೆ.

ಮುಂದಿನ ಮೂರು ತಿಂಗಳೊಳಗೆ ಪರಿಹಾರದ ಮೊತ್ತಕ್ಕೆ ಸೇರಿ ₹15.61 ಲಕ್ಷ ಬಡ್ಡಿ ಸೇರಿ ಒಟ್ಟು ₹71.33 ಲಕ್ಷ ಪಾವತಿಸಲು ನ್ಯಾಯಾಲಯ ಅಂತಿಮ ಗಡುವು ನಿಗದಿ ಮಾಡಿದೆ. 

ಗಡುವಿನೊಳಗೆ ಹಣ ಪಾವತಿಯಾಗದಿದ್ದರೆ ಜಪ್ತಿ ಮಾಡಿದ ಬಸ್ ಹರಾಜು ಮಾಡಲಾಗುವುದು. ಇನ್ನೂ ಹಣ ಬಾಕಿ ಉಳಿದಿದ್ದರೆ ಮತ್ತೊಂದು ವಾಹನ ಜಪ್ತಿ ಮಾಡುವುದಾಗಿ ವಕೀಲರು ಎಚ್ಚರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 2