ಪ್ರೀತಿಸಿದ ಯುವಕನನ್ನು ಮದುವೆಯಾದ ಮಗಳು; ಶ್ರಾದ್ಧ ಮಾಡಿ ಊರಿಗೇ ಊಟ ಹಾಕಿದ ತಂದೆ!

Oct 11, 2025 - 19:39
 0  1.3k
ಪ್ರೀತಿಸಿದ ಯುವಕನನ್ನು ಮದುವೆಯಾದ ಮಗಳು; ಶ್ರಾದ್ಧ ಮಾಡಿ ಊರಿಗೇ ಊಟ ಹಾಕಿದ ತಂದೆ!
Photo credit: boldsky Kannada (ಸಾಂದರ್ಭಿಕ ಚಿತ್ರ)

ಚಿಕ್ಕೋಡಿ (ಬೆಳಗಾವಿ): ಪ್ರೀತಿಸಿದ ಯುವಕನನ್ನು ಮದುವೆಯಾದ ಮಗಳಿಗೆ ತಂದೆಯೇ ಜೀವಂತ ಶ್ರಾದ್ಧ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.

ಕುಟುಂಬದ ವಿರೋಧದ ನಡುವೆಯೇ ಪ್ರೇಮ ವಿವಾಹ ಮಾಡಿಕೊಂಡ ಯುವತಿಯ ಈ ನಿರ್ಧಾರ ಕುಟುಂಬಕ್ಕೆ ಅಸಹ್ಯವಾಗಿದ್ದರಿಂದ ತಂದೆಯು ಸಾಮಾಜಿಕವಾಗಿ ಆಕೆಯ ಶ್ರಾದ್ಧ ವಿಧಿ ನೆರವೇರಿಸಿ ಊರಿಗೇ ಊಟ ಹಾಕಿದ್ದಾರೆ.

 ಮಾಹಿತಿ ಪ್ರಕಾರ, ನಾಗರಾಳ ಗ್ರಾಮದ ವ್ಯಕ್ತಿಯೊಬ್ಬರ 19 ವರ್ಷದ ಮಗಳು ಕಳೆದ ವಾರ ಅದೇ ಗ್ರಾಮದ ಯುವಕನೊಂದಿಗೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾದಳು. ಇಬ್ಬರೂ ಹಿಂದಿನಿಂದಲೇ ಪರಿಚಿತರಾಗಿದ್ದು, ಅವರ ಸ್ನೇಹವು ಪ್ರೀತಿಗೆ ತಿರುಗಿತ್ತು. ಇಬ್ಬರು ಮನೆಯವರ ಮುಂದೆ ಮದುವೆ ಪ್ರಸ್ತಾಪ ಮಾಡಿದರೂ ಕುಟುಂಬದವರು ವಿರೋಧಿಸಿದ್ದರು. ಹೀಗಾಗಿ ಪ್ರೇಮಿಗಳು ಕುಟುಂಬದ ವಿರೋಧವನ್ನು ಮೀರಿ ವಿವಾಹವಾಗಿದ್ದರು.

ಈ ಕುರಿತು ಯುವತಿಯ ತಂದೆ ರಾಯಬಾಗ ಪೊಲೀಸ್ ಠಾಣೆಗೆ ಮಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಯುವ ದಂಪತಿಯನ್ನು ಪತ್ತೆಹಚ್ಚಿ, ರಾಜಿ ಪಂಚಾಯಿತಿ ನಡೆಸಿದರು. ಆಗ ಯುವತಿಯು ತಾನು ಪ್ರೀತಿಸಿದ ವ್ಯಕ್ತಿಯೊಂದಿಗೇ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಳು.

ಈ ಹಿನ್ನೆಲೆಯಲ್ಲಿ ಕೋಪಗೊಂಡ ತಂದೆ, "ನಮ್ಮ ಮಗಳು ನಮ್ಮ ಸಂಸ್ಕಾರ, ಪರಂಪರೆ, ಗೌರವ ಎಲ್ಲವನ್ನೂ ಬಿಟ್ಟು ಹೋಗಿದ್ದಾಳೆ. ಆಕೆ ನಮ್ಮ ಪಾಲಿಗೆ ಸತ್ತಳು ಎಂದು ಶ್ರಾದ್ಧ ವಿಧಿ ನೆರವೇರಿಸಿ ಊರಿಗೆ ಊಟ ಹಾಕಿದ್ದೇವೆ. ಈಗಿನಿಂದ ಆಕೆಯಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ಕರಾರು ಪತ್ರ ಬರೆಸಿದ್ದು, ಅದಕ್ಕೆ ಆಕೆಯೂ ಸಹ ಸಹಿ ಹಾಕಿದ್ದಾಳೆ" ಎಂದು ತಿಳಿಸಿದ್ದಾರೆ.

“ನಮಗೆ ನಾಲ್ಕು ಹೆಣ್ಣು ಮಕ್ಕಳು, ಇವಳು ಕಿರಿಯವಳು. ಈಗಿನಿಂದ ಆಕೆ ನಮ್ಮ ಕುಟುಂಬದ ಸದಸ್ಯೆಯಾಗಿಲ್ಲ. ಈ ಘಟನೆ ನಮ್ಮ ವಯಸ್ಸಿನಲ್ಲಿ ತೀವ್ರ ಮಾನಸಿಕ ನೋವು ತಂದಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

What's Your Reaction?

Like Like 1
Dislike Dislike 0
Love Love 1
Funny Funny 2
Angry Angry 0
Sad Sad 2
Wow Wow 1