ಸೈಬರ್ ವಂಚಕರ ಬೃಹತ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು | ₹150 ಕೋಟಿ ವಂಚನೆ ಪತ್ತೆ, ಪ್ರಮುಖ ಆರೋಪಿ ಬಂಧನ, ಇಬ್ಬರು ಪರಾರಿ

Oct 11, 2025 - 19:09
 0  1.7k
ಸೈಬರ್ ವಂಚಕರ ಬೃಹತ್ ಜಾಲ ಭೇದಿಸಿದ ದಾವಣಗೆರೆ ಪೊಲೀಸರು | ₹150 ಕೋಟಿ  ವಂಚನೆ ಪತ್ತೆ, ಪ್ರಮುಖ ಆರೋಪಿ ಬಂಧನ, ಇಬ್ಬರು ಪರಾರಿ

ದಾವಣಗೆರೆ, ಅ.11: ದೇಶದ ವಿವಿಧೆಡೆ ಬ್ಯಾಂಕ್ ಖಾತೆಗಳಿಂದ ಕೋಟಿ ಕೋಟಿ ರೂಪಾಯಿ ದೋಚುತ್ತಿದ್ದ ಸೈಬರ್ ವಂಚಕರ ಬೃಹತ್ ಜಾಲವನ್ನು ದಾವಣಗೆರೆ ಸೈಬರ್ ಕ್ರೈಮ್ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ₹150 ಕೋಟಿ ವಂಚನೆ ನಡೆದಿದೆ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಮೂವರು ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ನಿಟ್ಟುವಳ್ಳಿ ಕೆನರಾ ಬ್ಯಾಂಕ್‌ನ ಖಾತೆದಾರ ಪ್ರಮೋದ್ ಎಚ್.ಎನ್. ಅವರ ಖಾತೆಯಿಂದ ₹52,60,523 ರೂ. ನಾಪತ್ತೆಯಾಗಿದ್ದ ಪ್ರಕರಣದ ತನಿಖೆ ವೇಳೆ ಈ ಮಹತ್ತರ ವಂಚನಾ ಜಾಲ ಪತ್ತೆಯಾಗಿದೆ. ಬಂಧಿತನನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಶಾಂತಿನಗರ ನಿವಾಸಿ ಸೈಯದ್ ಅರಾಫತ್ (28) ಎಂದು ಗುರುತಿಸಲಾಗಿದೆ.

 ಜುಲೈ 27ರಿಂದ ಆಗಸ್ಟ್ 19ರವರೆಗೆ ಆರೋಪಿಯ ಖಾತೆಗೆ ಸುಮಾರು ₹150 ಕೋಟಿ ವಂಚನೆಯ ಹಣ ಠೇವಣಿಯಾಗಿದೆ. ಅದರಲ್ಲಿ ₹132 ಕೋಟಿ ಹಣವನ್ನು ವಿತ್‌ಡ್ರಾ ಮಾಡಲಾಗಿದ್ದು, ಉಳಿದ ₹18 ಕೋಟಿಯನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.

ತನಿಖೆಯಲ್ಲಿ ಆರೋಪಿಯು ಉತ್ತರ ಪ್ರದೇಶದ ಗಾಜಿಯಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರಪ್ರದೇಶದ ಏಲೂರು, ಮಹಾರಾಷ್ಟ್ರದ ಮುಂಬೈ, ಹಾಗೂ ಕರ್ನಾಟಕದ ಬೆಂಗಳೂರು ಮತ್ತು ದಾವಣಗೆರೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಪತ್ತೆಯಾಗಿದೆ.

 ಈ ಕಾರ್ಯಾಚರಣೆಯನ್ನು ದಾವಣಗೆರೆ ಸೈಬರ್ ಕ್ರೈಮ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡ ಯಶಸ್ವಿಯಾಗಿ ಕೈಗೊಂಡಿದೆ. ಉಳಿದ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

 ದಾವಣಗೆರೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಅವರು ಸೈಬರ್ ಕ್ರೈಮ್ ತಂಡದ ಕಾರ್ಯವನ್ನು ಶ್ಲಾಘಿಸಿ, “ದೇಶವ್ಯಾಪಿ ಸೈಬರ್ ಅಪರಾಧ ಜಾಲವನ್ನು ಪತ್ತೆಹಚ್ಚುವಲ್ಲಿ ದಾವಣಗೆರೆ ಪೊಲೀಸರ ಕಾರ್ಯವು ಮಾದರಿಯಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 6
Dislike Dislike 0
Love Love 3
Funny Funny 0
Angry Angry 2
Sad Sad 3
Wow Wow 2