ಪೆಗ್ಗೋಲಿಯಲ್ಲಿ ಸೂರಿಗಾಗಿ ಅಹೋರಾತ್ರಿ ಪ್ರತಿಭಟನೆ 304ನೇ ದಿನಕ್ಕೆ
admincoorgdaily

ಮಡಿಕೇರಿ :-ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಡುವ ಎಂಬಲ್ಲಿ 49/3 ಸರ್ವೇ ನಂಬರಿನ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ನಡೆಸುತ್ತಿರುವ ಹೊದ್ದೂರು ಗ್ರಾಮ ನಿವೇಶನ ರಹಿತರ ಅಹೋರಾತ್ರಿ ಪ್ರತಿಭಟನೆ 304ನೇ ದಿನಕ್ಕೆ ಕಾಲಿರಿಸಿದೆ. ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ 300 ಕುಟುಂಬಗಳು, ಮೂರ್ನಾಡು ಪಂಚಾಯತಿಯಲ್ಲಿ 300 ಆದಿವಾಸಿ ಹಾಗೂ ದಲಿತ ಕುಟುಂಬಗಳು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಪುಟ್ಟ ಮಕ್ಕಳೊಂದಿಗೆ ವಯೋವೃದ್ಧರು ಸೇರಿ ಮಹಿಳೆಯರು, ಪುರುಷರು ತಾತ್ಕಾಲಿಕ ಶೆಡ್ ಅನ್ನು ನಿರ್ಮಿಸಿ ಕಳೆದ ಹತ್ತು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. ಮಡಿಕೇರಿ ತಾಲೂಕು ತಹಶೀಲ್ದಾರ್ ಅವರು ಕಳೆದ ನವಂಬರ್ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ ಇದುವರೆಗೂ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಆಲಿಸಲಿಲ್ಲವೆಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಅವರು ಮಾತನಾಡಿ, 49/3 ಸರ್ವೆ ನಂಬರಿನ ಜಾಗ ಸರ್ಕಾರಿ ಜಾಗವಾಗಿದ್ದು ತಹಶೀಲ್ದಾರ್ ನೇತೃತ್ವದಲ್ಲಿ ಸರ್ವೆ ಕಾರ್ಯಮುಗಿಸಿ ಎರಡು ಎಕರೆ ಜಾಗದ ನೀಲಿ ನಕ್ಷೆ ತಯಾರಿಸಿ ಬಡವರಿಗೆ ಕೊಡುವುದಾಗಿ ತೀರ್ಮಾನಿಸಲಾಗಿತ್ತು. ಸದರಿ ಹೋರಾಟ ಮುನ್ನೂರ ನಾಲ್ಕು ದಿನ ಪೂರೈಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರ ಎಲ್ಲ ಭಾಗ್ಯಗಳನ್ನು ನೀಡಿದ್ದರು ಬಡವರಿಗೆ ನಿವೇಶನ ಭಾಗ್ಯ ದೊರಕಿಸಿ ಕೊಟ್ಟಿಲ್ಲ. ಸರಕಾರ ಎಲ್ಲ ಭೂಮಿ ಭಾಗ್ಯಗಳನ್ನು ಶ್ರೀಮಂತರಿಗೆ ನೀಡಿ ದುಡಿವ ಭಾಗ್ಯವನ್ನು ಬಡವರಿಗೆ ನೀಡುತ್ತಿದೆ. ಎಂದು ಆಕ್ರೋಶ ವ್ಯಕಕ್ರಪಡಿಸಿದರಲ್ಲದೆ, ಒಂದು ತಿಂಗಳಲ್ಲಿ ನಿವೇಶನ ನಿರ್ಮಾಣ ಹಾಗೂ ಉಳಿದ ಬಡವರಿಗೆ ಭೂಮಿ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಹುಜನ ಕಾರ್ಮಿಕ ಸಂಘದ ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷ ಕಿರಣ್ ಜಗದೀಶ್ ಅವರು ಮಾತನಾಡಿ, ಪೆಗ್ಗೊಲ್ಲಿ ಹೋರಾಟ ನವೆಂಬರ್ ತಿಂಗಳಿನಿಂದ ಆರಂಭವಾಗಿ 304 ದಿನ ಕಳೆದಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಫಲಾನುಭವಿಗಳು ಮಳೆಗಾಳಿಯನ್ನು ಲೆಕ್ಕಿಸದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದರು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ಒಂದು ತಿಂಗಳೊಳಗೆ ನಮ್ಮ ಸಮಸ್ಯೆಗೆ ಪರಿಹಾರ ದೊರೆದಿದ್ದಲ್ಲಿ ತೀವ್ರತರಾವಾದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ, ಮಡಿಕೇರಿ ನಗರಸಭೆ ಸದಸ್ಯ ಹಾಗೂ ಎಸ್. ಡಿ. ಪಿ. ಐ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಅವರು ಮಾತನಾಡಿ, ಮನುಷ್ಯನ ಒಂದು ವರ್ಷದ ಆಯಸ್ಸು ಈ ಹೋರಾಟದಲ್ಲಿ ಕಳೆದುಕೊಂಡಿರುವುದು ಶೋಚನೀಯ ಬಡವರ ಕಲ್ಯಾಣಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಬಡ ಜನರ ಕಲ್ಯಾಣ ಮಾಡುತ್ತೇವೆಂಬ ಯೋಜನೆಗಳು ಇಂದು ಹುಸಿಯಾಗಿವೆ. ಬಡವರು ತಮ್ಮ ಹಕ್ಕಿಗಾಗಿ ಪ್ಲಾಸ್ಟಿಕ್ ಹೊದಿಕೆ ಇರುವ ಗುಡಿಸಿಲಿನಲ್ಲಿ ವಾಸ ಮಾಡಿಕೊಂಡು ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ಸರಕಾರ ನಿವೇಶನ ರಹಿತರ ಬೇಡಿಕೆ ಈಡೇರಿಸುವವರೆಗೂ ಎಸ್‌ಡಿಪಿಐ ಪಕ್ಷ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದರು.
ಬಹುಜನ ಕಾರ್ಮಿಕ ಸಂಘದ ಪದಾಧಿಕಾರಿ ಹಾಗೂ ಪೆಗ್ಗೊಲ್ಲಿ ನಿವೇಶನ ಹೋರಾಟ ಸಮಿತಿಯ ಮೇಲ್ಸಮಿತಿ ಸದಸ್ಯ ಮಹೇಶ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳ ಬೆಂಬಲ ಪಡೆದುಕೊಂಡು ದಿಡ್ಡಳ್ಳಿ ಹೋರಾಟದಂತೆ ಈ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯೆ ಕುಸುಮಾವತಿ ಮಾತನಾಡಿ, ಕಳೆದ 10 ತಿಂಗಳುಗಳಿoದ ಹೋರಾಟ ನಡೆಸುತ್ತಿರುವ ನಿವೇಶನರಹಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಹೋರಾಟ ಸಮಿತಿಯ ಅಧ್ಯಕ್ಷ ಸಂಜೀವ , ಉಪಾಧ್ಯಕ್ಷೆ ಸುಜಾತ, ಪ್ರಧಾನ ಕಾರ್ಯದರ್ಶಿ ಚೋಂದಮ್ಮ, ಉಪ ಕಾರ್ಯದರ್ಶಿ ಮಂಜುಳ, ಪೊನ್ನತ್ ಮೊಟ್ಟೆ ಹೋರಾಟ ಸಮಿತಿ ಅಧ್ಯಕ್ಷ, ಚಂದ್ರಶೇಖರ್, ಅಮ್ಮತ್ತಿ ಹೋರಾಟ ಸಮಿತಿಯ ಕಾರ್ಯದರ್ಶಿ ಯಶೋಧ, ಕಬಡಗೇರಿ ಹೋರಾಟ ಸಮಿತಿಯ ಉಪಾಧ್ಯಕ್ಷೆ ಸುಮಾ, ಕಾರ್ಯದರ್ಶಿ ಅಪ್ಪಣ್ಣ, ನಾಪೋಕ್ಲು ಹೋರಾಟ ಸಮಿತಿಯ ಮಣಿಕಂಠ, ಕೊಂಡಗೇರಿ ಹೋರಾಟ ಸಮಿತಿಯ ಅಣ್ಣು, ಕುಂಬಳದಾಳು ಹೋರಾಟ ಸಮಿತಿಯ ಸತ್ಯ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರರು ಇದ್ದರು.
ವರದಿ:ರೋಷನ್ ಚೆಪ್ಪುಡಿರ