ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತು ಹಾಕಿರುವ ಪ್ರಕರಣ: ಗುರುತು ಮಾಡಿರುವ ಸ್ಥಳಗಳಲ್ಲಿ ಅಗೆಯುವ ಕೆಲಸ ಆರಂಭ
admincoorgdaily
ಧರ್ಮಸ್ಥಳ: ಗ್ರಾಮದ ವಿವಿಧೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೋರ್ವ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ಮುಂದುವರಿದಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ. ದೂರುದಾರನನ್ನೂ ಎಸ್ಐಟಿ ಸ್ಥಳಕ್ಕೆ ಕರೆತಂದಿದೆ. ಸೋಮವಾರ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು 13 ಸ್ಥಳಗಳನ್ನು ಗುರುತಿಸಿದ್ದನು. ಆ 13 ಸ್ಥಳಗಳಿಗೆ ಇಂದು ಮತ್ತೆ ಆಗಮಿಸಿರುವ ಎಸ್ಐಟಿ, ಗುರುತು ಮಾಡಿರುವ ಸ್ಥಳಗಳನ್ನು ಅಗೆಯಲು ಕಾರ್ಮಿಕರನ್ನು ಕರೆಸಿದೆ. ಈಗಾಗಲೇ ಕಾರ್ಮಿಕರು ಹಾರೆ, ಪಿಕ್ಕಾಸು ಸಹಿತ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು, ಅಗೆಯುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.