ಹನಿಟ್ರ್ಯಾಪ್ ಎಂದು ಸುಳ್ಳು ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡನೇ ಯುವಕ? : ಯುವತಿಯ ಮೊಬೈಲ್ ಗೆ ಖಾಸಗಿಯಾಗಿ ಬಂದಿತ್ತು ಬಟ್ಟೆ ಬದಲಾಯಿಸುವ ವಿಡಿಯೋ!

Oct 20, 2025 - 20:01
 0  2.4k
ಹನಿಟ್ರ್ಯಾಪ್ ಎಂದು ಸುಳ್ಳು ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡನೇ ಯುವಕ? : ಯುವತಿಯ ಮೊಬೈಲ್ ಗೆ ಖಾಸಗಿಯಾಗಿ ಬಂದಿತ್ತು ಬಟ್ಟೆ ಬದಲಾಯಿಸುವ ವಿಡಿಯೋ!
Photo credit: Asaint news

ಉಡುಪಿ, ಅ.20: ಕಾರ್ಕಳ ತಾಲೂಕಿನ ನಿಟ್ಟೆ ಪರಪ್ಪಾಡಿಯ ಯುವಕ ಅಭಿಷೇಕ್ ಆಚಾರ್ಯ (23) ಆತ್ಮಹತ್ಯೆ ಪ್ರಕರಣದಲ್ಲಿ “ಹನಿಟ್ರ್ಯಾಪ್” ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳು ಈವರೆಗೆ ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸ್ಪಷ್ಟಪಡಿಸಿದ್ದಾರೆ.

ಅ.9ರಂದು ಬೆಳ್ಳಣ್‌ ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಷೇಕ್, ತನ್ನ ಡೆತ್‌ನೋಟ್‌ನಲ್ಲಿ ಯುವತಿ ಸೇರಿದಂತೆ ನಾಲ್ವರು ಸ್ನೇಹಿತರು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಕಿರುಕುಳ ನೀಡಿದ್ದರೆಂದು ಉಲ್ಲೇಖಿಸಿದ್ದ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಮೊಬೈಲ್‌ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ತನಿಖೆಯ ಪ್ರಗತಿಯ ಕುರಿತು ಮಾಹಿತಿ ನೀಡಿದ ಎಸ್ಪಿ ಹರಿರಾಂ ಶಂಕರ್, “ಆರೋಪಿಗಳ ಮೊಬೈಲ್, ಬ್ಯಾಂಕ್ ವಹಿವಾಟು ಮತ್ತು ಚಾಟ್ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆರೋಪಿ ಯುವತಿಯ ಮೊಬೈಲ್‌ನಲ್ಲಿ ಯಾವುದೇ ಅಶ್ಲೀಲ ಫೋಟೋ ಅಥವಾ ವಿಡಿಯೋ ಸಿಕ್ಕಿಲ್ಲ. ಅಕೆ ಯಾರಿಗೂ ಅಂತಹ ವಿಡಿಯೋ ಕಳುಹಿಸಿಲ್ಲ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ಕಳುಹಿಸಿದ್ದ ಹಣವನ್ನು ಆಕೆ ಅದೇ ದಿನ ವಾಪಸ್ ನೀಡಿದ್ದಾಳೆ,” ಎಂದು ಹೇಳಿದರು.

 “ಆತ್ಮಹತ್ಯೆಗೆ ಮುನ್ನ ಅಭಿಷೇಕ್ ಆರೋಪಿ ಯುವತಿಯ ಅಶ್ಲೀಲ ವಿಡಿಯೋವನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಸಹೋದ್ಯೋಗಿಗಳ ವಾಟ್ಸ್ಆ್ಯಪ್‌ ಗ್ರೂಪ್‌ಗೆ ಹಂಚಿದ್ದ. ಈ ವಿಚಾರ ತಿಳಿದ ನಂತರ ಯುವತಿ ಪೊಲೀಸರಿಗೆ ದೂರು ನೀಡುವುದಾಗಿ ಅಭಿಷೇಕ್‌ಗೆ ತಿಳಿಸಿದ್ದಳು. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಯುವತಿಯ ಸ್ನೇಹಿತೆಯೇ ತನ್ನ ಉಡುಪು ಬದಲಿಸುವ ಸಮಯದಲ್ಲಿ ರೆಕಾರ್ಡ್ ಮಾಡಿ ಆಕೆಗೆ ಖಾಸಗಿಯಾಗಿ ಕಳುಹಿಸಿದ್ದಳು. ಆ ವಿಡಿಯೋ ಅಭಿಷೇಕ್‌ನ ಕೈಗೆ ಯುವತಿಯ ವಾಟ್ಸ್ಆ್ಯಪ್‌ ಮೂಲಕ ಸಿಕ್ಕಿತೆಂಬುದು ತನಿಖೆಯಿಂದ ಹೊರಬಂದಿದೆ” ಎಂದು ಊ ವಿವರಿಸಿದರು.

“ಅಭಿಷೇಕ್‌ನ ಮೊಬೈಲ್ ಹೆಚ್ಚಿನ ತಾಂತ್ರಿಕ ವಿಶ್ಲೇಷಣೆಗೆ ಎಫ್‌ಐಎಲ್‌ಗೆ ಕಳುಹಿಸಲಾಗಿದೆ. ಡೆತ್‌ನೋಟ್‌ನ ಕೈಬರಹ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ,” ಎಂದು ಎಸ್ಪಿ ಶಂಕರ್ ಹೇಳಿದರು.

ಇನ್ನೊಂದು ಕಡೆ, ಸಾಮಾಜಿಕ ಜಾಲತಾಣಗಳಲ್ಲಿ ಮೃತ ಅಭಿಷೇಕ್ ಮತ್ತು ಆರೋಪಿ ಯುವತಿ ಕುರಿತು ಅಶ್ಲೀಲ ಪೋಸ್ಟ್‌ಗಳು ಹರಿದಾಡುತ್ತಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. “ಇಂತಹ ಪೋಸ್ಟ್‌ಗಳು ಕಾನೂನಾತ್ಮಕವಾಗಿ ಶಿಕ್ಷಾರ್ಹ. ಈಗಾಗಲೇ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಚಿತ್ರ, ವಿಡಿಯೋ ಅಥವಾ ಫೋಟೋ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0