ತಡಿಯಂಡಮೋಳ್ ಬೆಟ್ಟದ ತುದಿಯಲ್ಲಿ ‌ನಾಯಿಯೊಂದರ ಜೊತೆ ಆಟವಾಡುತ್ತಿದ್ದ ಟೆಕ್ಕಿ ಶರಣ್ಯ ದಾರಿ‌ ತಪ್ಪಿದ್ದು ಹೇಗೆ ಗೊತ್ತೇ!

Apr 6, 2026 - 00:19
 0  2.8k
ತಡಿಯಂಡಮೋಳ್  ಬೆಟ್ಟದ ತುದಿಯಲ್ಲಿ ‌ನಾಯಿಯೊಂದರ ಜೊತೆ ಆಟವಾಡುತ್ತಿದ್ದ ಟೆಕ್ಕಿ ಶರಣ್ಯ ದಾರಿ‌ ತಪ್ಪಿದ್ದು ಹೇಗೆ ಗೊತ್ತೇ!

ಮಡಿಕೇರಿ: ಕೊಡಗಿನ ಅತ್ಯುನ್ನತ ಶಿಖರ ‘ತಡಿಯಂಡಮೋಲ್’ ಚಾರಣಕ್ಕೆ ತೆರಳಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಜಿ.ಎಸ್ (36) ಅವರು ನಾಲ್ಕು ದಿನಗಳ ಭೀಕರ ಸವಾಲುಗಳ ನಂತರ ಭಾನುವಾರ (ಏಪ್ರಿಲ್ 5) ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆದಿವಾಸಿಗಳು ಮತ್ತು ಜಿಲ್ಲಾಡಳಿತ ನಡೆಸಿದ ತೀವ್ರ ಶೋಧ ಕಾರ್ಯದ ಫಲವಾಗಿ ಅವರು ಪತ್ತೆಯಾಗಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕೇರಳದ ಶರಣ್ಯ ಅವರು ಚಾರಣಕ್ಕಾಗಿ ಒಬ್ಬಂಟಿಯಾಗಿ ಕೊಡಗಿಗೆ ಆಗಮಿಸಿದ್ದರು. ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಹೋಂಸ್ಟೇ ಒಂದರಲ್ಲಿ ತಂಗಿದ್ದ ಅವರು, ಏಪ್ರಿಲ್ 2 ರಂದು ತಡಿಯಂಡಮೋಲಳ್ ಚಾರಣ ಆರಂಭಿಸಿದ್ದರು. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ವಿವರ ದಾಖಲಿಸುವಾಗ, ಅಧಿಕಾರಿಗಳು ಆನೆಗಳ ಭೀತಿ ಇರುವುದರಿಂದ ಗುಂಪಿನ ಜೊತೆ ತೆರಳುವಂತೆ ಸೂಚಿಸಿದ್ದರು. ಅದರಂತೆ ಶರಣ್ಯ ಸುಮಾರು 10 ಜನರಿದ್ದ ತಂಡವೊಂದರ ಜೊತೆಗೂಡಿ ಬೆಟ್ಟ ಏರಿದ್ದರು. 

ಗುಂಪು ತಪ್ಪಿಸಿಕೊಂಡು ದಾರಿ ತಪ್ಪಿದ ಕ್ಷಣ;

ಬೆಟ್ಟದ ತುದಿಯಲ್ಲಿ ನಾಯಿಯೊಂದರ ಜೊತೆ ಆಟವಾಡುತ್ತಿದ್ದ ಶರಣ್ಯ, ತಾವು ಒಬ್ಬರೇ ಕೆಳಗಿಳಿಯುವುದಾಗಿ ತಿಳಿಸಿದ್ದರು. ಆದರೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಾವು ದಾರಿ ತಪ್ಪಿರುವುದಾಗಿ ಹೋಂಸ್ಟೇ ಸಿಬ್ಬಂದಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು. ಅಷ್ಟರಲ್ಲೇ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿದ್ದರಿಂದ ಅವರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು. ಉಳಿದ ಚಾರಣಿಗರು ಸಂಜೆ ವೇಳೆಗೆ ಸುರಕ್ಷಿತವಾಗಿ ಮರಳಿದ್ದರೂ ಶರಣ್ಯ ನಾಪತ್ತೆಯಾಗಿದ್ದರು.

ಕಾಡಿನ ನಡುವೆ ಅತಂತ್ರ ಸ್ಥಿತಿ: ಶರಣ್ಯ ಹಂಚಿಕೊಂಡ ಅನುಭವ;

ಕಾಡಿನಲ್ಲಿ ನಾಲ್ಕು ದಿನಗಳ ತೀವ್ರ ಹುಡುಕಾಟದ ನಂತರ ಪತ್ತೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಾನು ನಾಲ್ಕು ದಿನಗಳನ್ನು ಹೇಗೆ ಕಳೆದಿದ್ದೇನೆ ಎಂಬುದನ್ನು ವಿವರಿಸಿದ್ದಾರೆ.

ಮೊದಲ ದಿನ ತಂಡದಿಂದ ಬೇರ್ಪಟ್ಟ ನಂತರ ದಟ್ಟ ಕಾಡು ಸೇರಿಕೊಂಡಿದ್ದೆ. ಕೇವಲ 500 ಮಿಲಿ ನೀರು ಮಾತ್ರ ಇತ್ತು. ಕಾಲು ನೋವಿನಿಂದಾಗಿ ಹೆಚ್ಚು ಚಲಿಸಲು ಸಾಧ್ಯವಾಗಲಿಲ್ಲ. ಡ್ರೋನ್ ಮೂಲಕ ಹುಡುಕಾಟ ನಡೆಸಬಹುದು ಎಂಬ ಆಲೋಚನೆಯಿಂದ, ಎರಡನೇ ದಿನ ದಟ್ಟ ಮರಗಳಿಲ್ಲದ ಬಯಲು ಪ್ರದೇಶದಲ್ಲಿ ಕುಳಿತಿದ್ದೆ. ಮೂರನೇ ದಿನ ಸ್ವಲ್ಪ ನಡೆಯಲು ಪ್ರಯತ್ನಿಸಿದೆ, ಆದರೆ ಮಳೆಯಿಂದಾಗಿ ದಾರಿ ಜಾರುತ್ತಿತ್ತು. ನಾಲ್ಕನೇ ದಿನವೂ ಬೆಳಿಗ್ಗೆ ಮತ್ತು ಸಂಜೆ ಯಾರಾದರೂ ಕೇಳಿಸಿಕೊಳ್ಳಬಹುದು ಎಂಬ ಆಸೆಯಿಂದ ಕಿರುಚುತ್ತಿದ್ದೆ. ಇಂದು ಮರವೊಂದನ್ನು ಹತ್ತಿ ಕುಳಿತಿದ್ದಾಗ ಶಬ್ದ ಕೇಳಿಸಿತು, ಆಗ ಜೋರಾಗಿ ಕೂಗಿದ್ದಕ್ಕೆ ನನ್ನನ್ನು ರಕ್ಷಿಸಿದರು ಎಂದು ತಿಳಿಸಿದ್ದಾರೆ.

ಬೃಹತ್ ಶೋಧ ಕಾರ್ಯ ಮತ್ತು ಯಶಸ್ಸು;

ಶರಣ್ಯ ಪತ್ತೆಗಾಗಿ ಜಿಲ್ಲಾ ಪೊಲೀಸ್, ಅರಣ್ಯ ಇಲಾಖೆ, ನಕ್ಸಲ್ ನಿಗ್ರಹ ಪಡೆ (ANF), ಶ್ವಾನ ದಳ ಮತ್ತು ಸ್ಥಳೀಯ ಆದಿವಾಸಿ ಸಮುದಾಯದ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. ದಟ್ಟ ಅರಣ್ಯ, ಕಡಿದಾದ ಹಾದಿ ಮತ್ತು ನೆಟ್‌ವರ್ಕ್ ಸಮಸ್ಯೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಭಾನುವಾರ ಸಂಜೆ ವೇಳೆಗೆ ಹೆಚ್ಚಿನ ತಂಡಗಳು ಆಯಾಸಗೊಂಡು ಹಿಂತಿರುಗುತ್ತಿದ್ದಾಗ, ಅಂತಿಮವಾಗಿ ಆದಿವಾಸಿಗಳ ತಂಡ ಶರಣ್ಯ ಅವರಿದ್ದ ಜಾಗವನ್ನು ಪತ್ತೆಹಚ್ಚಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ನಾಲ್ಕು ದಿನಗಳ ಕಾಲ ಆಹಾರವಿಲ್ಲದೆ ಕಾಡಿನಲ್ಲಿ ಕಳೆದಿದ್ದ ಶರಣ್ಯ ಅವರನ್ನು ತಕ್ಷಣವೇ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

What's Your Reaction?

Like Like 10
Dislike Dislike 2
Love Love 2
Funny Funny 6
Angry Angry 0
Sad Sad 0
Wow Wow 2