ನಾಲ್ಕನೇ ಮಗುವೂ ಹೆಣ್ಣಾಗಿದ್ದಕ್ಕೆ ನವಜಾತ ಶಿಶುವನ್ನು ತಾಯಿ ಮಾಡಿದ್ದೇನು ಗೊತ್ತೇ!

ನಾಲ್ಕನೇ ಮಗುವೂ ಹೆಣ್ಣಾಗಿದ್ದಕ್ಕೆ ನವಜಾತ ಶಿಶುವನ್ನು ತಾಯಿ ಮಾಡಿದ್ದೇನು ಗೊತ್ತೇ!

ಬೆಳಗಾವಿ: ನಾಲ್ಕನೇ ಬಾರಿ ಹೆಣ್ಣು ಮಗು ಹುಟ್ಟಿದ್ದಕ್ಕೆ ಮನನೊಂದು, ನವಜಾತ ಶಿಶುವಿನ ಕತ್ತು ಹಿಸುಕಿ ಕೊಲೆ ಮಾಡಿದ ಅಮಾನುಷ ಘಟನೆ ರಾಮದುರ್ಗ ತಾಲ್ಲೂಕಿನ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಮುದಕವಿ ಗ್ರಾಮದ ಅಶ್ವಿನಿ ಹಣಮಂತ ಹಳಕಟ್ಟಿ ಅವರು ನವೆಂಬರ್ 23ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನನದ ಬಳಿಕ ಎರಡು ದಿನ ತಾಯಿ–ಮಗಳು ಇಬ್ಬರೂ ಆರೋಗ್ಯವಾಗಿದ್ದರೂ, ಮಂಗಳವಾರ ಬೆಳಗ್ಗೆ ಶಿಶು ಅಳುವುದಿಲ್ಲವೆಂದು ಗಮನಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಕತ್ತು ಹಿಸುಕಿರುವುದು ಪತ್ತೆಯಾಗಿದೆ.

“ಅಶ್ವಿನಿ–ಹಣಮಂತ ದಂಪತಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಈ ಬಾರಿ ಗಂಡು ಮಗುವಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮತ್ತೆ ಹೆಣ್ಣು ಮಗು ಹುಟ್ಟಿರುವುದರಿಂದ ಅಶ್ವಿನಿ ಮನನೊಂದು, ಶಿಶುವನ್ನು ಸಾಕುವ ಸಾಮರ್ಥ್ಯವಿಲ್ಲವೆಂದು ತಿಳಿಸಿದ್ದಾರೆ. ಹಣಮಂತ ಅವರ ತಮ್ಮನ ಮೂವರು ಮಕ್ಕಳನ್ನೂ ಅಶ್ವಿನಿಯೇ ನೋಡಿಕೊಳ್ಳುತ್ತಿರುವುದರಿಂದ ಆರು ಮಕ್ಕಳ ಜವಾಬ್ದಾರಿ ಈಗಾಗಲೇ ಅವರ ಮೇಲಾಗಿತ್ತು. ಈ ಒತ್ತಡದ ನಡುವೆ ಮತ್ತೊಂದು ಹೆಣ್ಣು ಮಗು ಹುಟ್ಟಿದ ಪರಿಣಾಮ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ,” ಎಂದು ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರು ತಿಳಿಸಿದ್ದಾರೆ.

ಅಶ್ವಿನಿ ಬಾಣಂತಿಯಾಗಿರುವುದರಿಂದ ಅವರನ್ನು ಬಂಧಿಸದೇ, ತಾಲ್ಲೂಕು ಆಸ್ಪತ್ರೆಯಲ್ಲಿ ಪೊಲೀಸ್ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆಯ ನಂತರ ಬಂಧನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಹೆರಿಗೆ ವಾರ್ಡಿನಲ್ಲಿ ಅಶ್ವಿನಿ ಒಬ್ಬರೇ ಇದ್ದರು. ಲಾರಿ ಚಾಲಕರಾದ ಹಣಮಂತ ಘಟನೆ ತಿಳಿದು ಆಸ್ಪತ್ರೆಗೆ ಧಾವಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.