ನೂತನ ಬಡಾವಣೆಗೆ ತಮ್ಮ ಹೆಸರು ನಾಮಕರಣಕ್ಕೆ ಡಾ ಮಂತರ್ ಗೌಡ ನಕಾರ; ಡಾ ಬಿ ಆರ್ ಅಂಬೇಡ್ಕರ್ ಹೆಸರಿಡಲು ಅಧಿಕಾರಿಗಳಿಗೆ ಸೂಚನೆ

Feb 18, 2026 - 19:56
 0  622
ನೂತನ ಬಡಾವಣೆಗೆ ತಮ್ಮ ಹೆಸರು ನಾಮಕರಣಕ್ಕೆ  ಡಾ ಮಂತರ್ ಗೌಡ ನಕಾರ;  ಡಾ ಬಿ ಆರ್ ಅಂಬೇಡ್ಕರ್ ಹೆಸರಿಡಲು ಅಧಿಕಾರಿಗಳಿಗೆ ಸೂಚನೆ

ಮಡಿಕೇರಿ; ತಾಲೂಕಿನ ಹೊದ್ದೂರು ಪಂಚಾಯತ್ ವ್ಯಾಪ್ತಿಯ ಕಬಡಕ್ಕೇರಿಯ ನಿವೇಶನ ರಹಿತರಿಗೆ ನೀಡಲಾದ ನೂತನ ಬಡಾವಣೆಗೆ ಡಾ ಮಂತರ್ ಗೌಡ ಬಡಾವಣೆ ಎಂದು ನಾಮಕರಣ ಮಾಡಲು ಫಲಾನುಭವಿಗಳು ಕೋರಿದ್ದು ಸದರಿ ಕೋರಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ನಯವಾಗಿ ನಿರಾಕರಿಸಿದ್ದು ಬದಲಿಗೆ ಬಾಬಾ ಸಾಹೇಬ್ ಡಾ ಬಿ.ಆರ್.ಅಂಬೇಡ್ಕರ್ ಬಡಾವಣೆ ಎಂದು ನಾಮಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಡಗು ಜಿಲ್ಲಾಡಳಿತ ಹಾಗೂ ಹೊದ್ದೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕಬಡಕ್ಕೇರಿಯ ನಡೆದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂತರ್ ಗೌಡ ರವರು ಭಾರತ ರತ್ನ ಬಿ.ಆರ್.ಅಂಬೇಡ್ಕರ್ ರವರು ನಾವೆಲ್ಲ ಹತ್ತು ಜನ್ಮ ಎತ್ತಿದರೂ ಸಾಧಿಸಲು ಸಾಧ್ಯವಾಗದಂತಹ ಮಹಾನ್ ಸಾಧನೆಯನ್ನು ಈ ದೇಶದ ಜನತೆಗಾಗಿ ಮಾಡಿದ್ದಾರೆ.ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ಬಡಾವಣೆಗೆ ನಾಮಕರಣ ಮಾಡುವುದು ಒಳಿತು ಎಂದು ವಿವರಿಸಿದರು‌.

ಒಟ್ಟು 60 ಅರ್ಹ ಮತ್ತು ಆಯ್ದ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗಿದ್ದು ಸದ್ಯದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಈ ನಿವೇಶನಗಳು ಸರ್ಕಾರದ ಯೋಜನೆ ಅನುಸಾರ ಉಚಿತವಾಗಿ ನೀಡಲಾಗಿದ್ದು ಯಾರಿಗೂ ಕೂಡ ಒಂದು ರೂಪಾಯಿಯನ್ನು ನೀಡಬಾರದು. ಅಧಿಕಾರಿಗಳು ಅಥವಾ ಯಾವುದೇ ವಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಲಹೆ ನೀಡಿದರು. ಯಾರು ಕೂಡ ನಿವೇಶನವನ್ನು ಇತರರಿಗೆ ಮಾರಾಟ ಮಾಡಬಾರದು.

ಮಾರಾಟ ಮಾಡಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಗಳಾದ ಎಸ್.ಜೆ. ಸೋಮಶೇಖರ್ ರವರು ಶಾಸಕ ಡಾ ಮಂತರ್ ಗೌಡ ರವರ ಪ್ರಯತ್ನ ಹಾಗೂ ಹಾಗೂ ಹೊದ್ದೂರು ಗ್ರಾಮ ಪಂಚಾಯತ್ ಸರ್ವಸದಸ್ಯರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಕೆಲಸ ಆಗಿದ್ದು ಶ್ರಮಿಸಿದ ಪ್ರತಿಯೊಬ್ಬರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರು ಡಾ ಮಂತರ್ ಗೌಡ ರವರು ಶಾಸಕರಾಗಿ ಆಯ್ಕೆಗೊಂಡ ಎರಡೂವರೆ ವರ್ಷದಲ್ಲಿ 9 ಕೋಟಿ ರೂಗಳಿಗೂ ಹೆಚ್ಚಿನ ಅನುದಾನವನ್ನು ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಗೆ ನೀಡಿದನ್ನು ವಿವರಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 300 ಹಕ್ಕು ಪತ್ರಗಳನ್ನು ಡಾ ಮಂತರ್ ಗೌಡ ರವರ ಅವಧಿಯಲ್ಲಿ ವಿತರಿಸಿದ್ದು ಇದೊಂದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದರು. ಪ್ರಾಸ್ತಾವಿಕ ವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಪಾಲೆಮಾಡು ಮೊಣ್ಣಪ್ಪ ನವರು ಚುನಾವಣೆ ಸಂಧರ್ಭದಲ್ಲಿ ಹಕ್ಕುಪತ್ರ ನೀಡುವ ಭರವಸೆಯನ್ನು ಡಾ ಮಂತರ್ ಗೌಡ ರವರ ಮುಂದೆ ಇಟ್ಟಿದ್ದು ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ತಹಶಿಲ್ದಾರ್ ಶ್ರೀಧರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್,ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್,ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಹನೀಫ್,ಹೊದ್ದೂರು ಗ್ರಾಮ ಪಂಚಾಯತ್ ಪಿ.ಡಿ.ಒ ವತ್ಸಲಾ ಕುಮಾರಿ,ಹೊಸ್ಕೇರಿ ಪಿ.ಡಿ.ಒ ಅಬ್ದುಲ್ಲಾ, ಪ್ರಮುಖರಾದ ತೆನ್ನಿರ ಮೈನಾ, ವಿ.ಜಿ.ಮೋಹನ್, ಅಪ್ರು ರವೀಂದ್ರ,ಕೊಳುಮಂಡ ರಫೀಕ್, ಗ್ರಾಮ ಪಂಚಾಯತ್ ಸದಸ್ಯರಾದ ಚೌರೀರ ಅನಿತಾ,ಹಮೀದ್, ಕುಸುಮಾವತಿ,ಲಕ್ಷ್ಮೀ, ಅನುರಾಧ,ಕಡ್ಲೆರ ಟೈನಿ,ಮೊಯ್ದು, ಕೆ.ಆರ್,ಅನಿತಾ ಸೇರಿದಂತೆ ಕಂದಾಯ ಅಧಿಕಾರಿಗಳು,ಪಂಚಾಯತ್ ಸಿಬ್ಬಂದಿಗಳು, ಫಲಾನುಭವಿ ಕುಟುಂಬದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0