ವ್ಯಸನ ಮುಕ್ತ ದಿನಾಚರಣೆ ಮಾದಕ ವಸ್ತುಗಳಿಗೆ ತುತ್ತಾಗದಿರಿ:ಎಸ್.ಪಿ ಬಿಂದುಮಣಿ
ಮಡಿಕೇರಿ:-ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯುವ ಪೀಳಿಗೆಯು ಜಾಗೃತರಾದರೆ ಮಾತ್ರ ಸಮಾಜದಿಂದ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಹೇಳಿದ್ದಾರೆ.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಕಾರದಲ್ಲಿ ಎಫ್.ಎಂ.ಸಿ.ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇವತ್ತಿನ ಯುವಪೀಳಿಗೆ ಡ್ರಗ್ಸ್, ಹೆರಾಯಿನ್, ಗಾಂಜಾ ಮತ್ತಿತರ ಮಾದಕ ವಸ್ತುಗಳಿಗೆ ಬಲಿಯಾಗದೆ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಬಿಂದುಮಣಿ ಅವರು ಸಲಹೆ ಮಾಡಿದರು.
ಯುವಜನರು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಯಾವುದೇ ರೀತಿಯ ಕೆಟ್ಟ ಚಟಕ್ಕೆ ತುತ್ತಾಗಬಾರದು, ಯುವಜನರು ದಾರಿ ತಪ್ಪಿದ್ದಲ್ಲಿ ಸಮಾಜಕ್ಕೆ ಕೆಟ್ಟ ಹೆಸರು ಬರಲಿದೆ. ಆದ್ದರಿಂದ ಈ ಬಗ್ಗೆ ಯುವಜನರು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಮಾದಕ ವಸ್ತುಗಳು ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಹೇಗೆ ಜೀವನವನ್ನು ನಾಶಪಡಿಸುತ್ತವೆ ಎಂಬುದನ್ನು ಸ್ವತಃ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಕರ್ನಾಟಕ ಸರ್ಕಾರ ಮತ್ತು ಪೆÇಲೀಸ್ ಇಲಾಖೆಯು ಯುವಜನತೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಡ್ರಗ್ಸ್ ಬೇಡ ಬ್ರೋ ಎಂಬ ಯುವ ಸ್ನೇಹಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾದಕ ವಸ್ತುಗಳ ತಡೆ ಹಾಗೂ ಡ್ರಗ್ ಪೆಡ್ಲರ್‍ಗಳನ್ನು ಬಂದಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.
ಮಾದಕ ವಸ್ತುಗಳ ಸೇವನೆಯು ಹೊಸತನ ಅಥವಾ ಆಧುನಿಕತೆಯ ಸಂಕೇತವಲ್ಲ, ಬದಲಿಗೆ ಇದು ವ್ಯಕ್ತಿಯ ಆರೋಗ್ಯ, ಭವಿಷ್ಯ ಮತ್ತು ಜೀವನವನ್ನು ಸಂಪೂರ್ಣವಾಗಿ ನಾಶಮಾಡುವ ಗಂಭೀರ ಸಮಸ್ಯೆಯಾಗಿದೆ. ಯುವಜನತೆ ತಾತ್ಕಾಲಿಕ ಖುಷಿ ಅಥವಾ ಕುತೂಹಲಕ್ಕಾಗಿ ಇವುಗಳಿಗೆ ದಾಸರಾಗಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಕರೆ ನೀಡಿದರು.
ಮಾದಕ ವಸ್ತು ಮಾರಾಟಗಾರರ (ಪೆಡ್ಲರ್) ಬಗ್ಗೆ ಕೆಎಸ್‍ಪಿ ಆ್ಯಪ್ ಅಥವಾ ಡ್ರಗ್ಸ್ ಫ್ರೀ ಕರ್ನಾಟಕ ಆ್ಯಪ್ ಮೂಲಕ ಹಾಗೂ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ರಹಸ್ಯವಾಗಿಡಲಾಗುತ್ತದೆ. ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತಗೊಳಿಸಲು ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಸದುಪಯೋಗ ಪಡಿಸಿಕೊಂಡು ಮಾದಕ ವಸ್ತುಗಳನ್ನು ಸೇವಿಸದಂತೆ ಜಾಗೃತಿ ಮೂಡಿಸಬೇಕು. ಆ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ.ರೂಪೇಶ್ ಗೋಪಾಲ್ ಅವರು ಮಾತನಾಡಿ ಯುವಜನರು, ವಿದ್ಯಾರ್ಥಿಗಳು, ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾಗಬಾರದು. ಉತ್ತಮ ಜೀವನ ಕಟ್ಟಿಕೊಂಡಾಗ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದರು.
ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯದ ಜೊತೆಗೆ ಇಡೀ ಕುಟುಂಬದ ನೆಮ್ಮದಿಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಇದರಿಂದ ಆರ್ಥಿಕ ಮುಗ್ಗಟ್ಟು, ಮಾನಸಿಕ ನೆಮ್ಮದಿ ಕೊರತೆ ಮತ್ತು ಕುಟುಂಬದಲ್ಲಿ ಕಲಹ ಉಂಟಾಗುತ್ತದೆ ಎಂದು ಹೇಳಿದರು.
ಮಾದಕ ವಸ್ತುಗಳ ಅತಿಯಾದ ಬಳಕೆ ವ್ಯಕ್ತಿಯ ವಿವೇಚನೆಯನ್ನು ನಾಶಪಡಿಸಿ, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬ ಅಥವಾ ಸುತ್ತಮುತ್ತಲಿನ ಮನೆಯಲ್ಲಿ ಯಾರಾದರೂ ಯಾವುದೇ ರೀತಿಯ ಮಾದಕ ಪದಾರ್ಥಗಳ ಸೇವನೆ ಇರುವ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಅವರನ್ನು ಜಿಲ್ಲಾಸ್ಪತ್ರೆಯ ಮನೋರೋಗ ವಿಭಾಗಕ್ಕೆ ಕರೆದುಕೊಂಡು ಬರುವಂತೆ ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 11 ರಲ್ಲಿ ಪ್ರತಿ ದಿನವು ಮನೋರೋಗ ವೈದ್ಯಧಿಕಾರಿಗಳು ಲಭ್ಯವಿದ್ದು, ತಕ್ಷಣವೇ ಚಿಕಿತ್ಸೆ ನೀಡಲಾಗುವುದು. ಭಾರತದಲ್ಲಿ ಕೌಟುಂಬಿಕ ಸಮಸ್ಯೆಗಳು ಮತ್ತು ಅನಾರೋಗ್ಯದ ನಂತರ ಆತ್ಮಹತ್ಯೆಗೆ ಅತ್ಯಂತ ಪ್ರಮುಖ ಕಾರಣವೆಂದರೆ ಮಾದಕ ವ್ಯಸನವಾಗಿದೆ. ಮಾದಕ ದ್ರವ್ಯಗಳು ವ್ಯಕ್ತಿಯ ಮಾನಸಿಕ ಸಮತೋಲನವನ್ನು ಸಂಪೂರ್ಣವಾಗಿ ನಾಶಪಡಿಸಿ, ಅವರನ್ನು ಆತ್ಮಹತ್ಯೆಯಂತಹ ತೀವ್ರ ನಿರ್ಧಾರದತ್ತ ತಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ದೇಶವನ್ನು ಮಾದಕ ಮುಕ್ತಗೊಳಿಸಿ ಸದೃಢಗೊಳಿಸಲು ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೇ.ರಾಘವ ಬಿ. ಅವರು ಮಾತನಾಡಿ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ದುಶ್ಚಟಗಳಿಗೆ ದಾಸರಾಗದೆ ಶಿಸ್ತುಬದ್ಧ ಜೀವನ ನಡೆಸಬೇಕು. ಸುಶಿಕ್ಷಿತರಾಗಿ ಬಾಳಬೇಕು ಎಂದರು.
ಕಾಲೇಜು ದಿನಗಳು ಜೀವನದ ಅತ್ಯಂತ ಪ್ರಮುಖ ಮತ್ತು ತಿರುವು ನೀಡುವ ಘಟ್ಟ. ಈ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯವನ್ನು ರೂಪಿಸುತ್ತವೆ. ಅದಕ್ಕಾಗಿಯೇ ಕಾಲೇಜು ದಿನಗಳಲ್ಲಿ ಉತ್ತಮ ಸ್ನೇಹಿತರ ಆಯ್ಕೆ ಅತೀ ಮುಖ್ಯ ಎಂದರು.
ಯಾರೊಂದಿಗೆ ಸ್ನೇಹ ಬೆಳೆಸುತ್ತೇವೆ ಎಂಬುದು ಜೀವನವನ್ನು ರೂಪಿಸುತ್ತದೆ. ಆ ನಿಟ್ಟಿನಲ್ಲಿ ತಪ್ಪು ಸ್ನೇಹಿತರ ಸಹವಾಸದಿಂದ ಸಮಾಜ ನಮ್ಮನ್ನು ಕೆಟ್ಟವರನ್ನಾಗಿ ಪರಿಗಣಿಸುತ್ತದೆ. ಒಳ್ಳೆಯ ಸ್ನೇಹಿತರು ಜವಾಬ್ದಾರಿಯುತ ಪ್ರಜೆಯಾಗಲು ಪ್ರೇರೆಪಿಸುತ್ತಾರೆ. ಆದ್ದರಿಂದ ಕಾಲೇಜು ದಿನಗಳಲ್ಲಿ ಗೆಳತನ ಮಾಡುವ ಸಂದರ್ಭ ನಿಮ್ಮ ಆಯ್ಕೆ ಸರಿಯಾಗಿರಲಿ ಎಂದು ಸಲಹೆ ನೀಡಿದರು.
ಡಾ.ಮಹಾಂತ ಶಿವಯೋಗಿ ಅವರು ತಮ್ಮ ಜೀವನವನ್ನು ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಮತ್ತು ಜನರ ದುಶ್ಚಟಗಳನ್ನು ತೊಡೆದುಹಾಕಲು ಸಂಪೂರ್ಣವಾಗಿ ಮೀಸಲಿದ್ದರು. ಅವರಂತೆ ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನವನ್ನು ನಡೆಸಬೇಕು. ಅದು ನಿಮ್ಮನ್ನಷ್ಟೇ ಅಲ್ಲದೆ, ಸುತ್ತಮುತ್ತಲಿನ ಮನೆಗಳ ಯುವಕರನ್ನು ಪರಿವರ್ತಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರನ್ನು ಸುಶಿಕ್ಷಿತರನ್ನಾಗಿ ಮಾಡುತ್ತದೆ ಎಂದು ಮೇಜರ್ ಡಾ.ಬಿ.ರಾಘವ ಅವರು ಹೇಳಿದರು.
ಡಿವೈಎಸ್‍ಪಿ ಸೂರಜ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳು (ಡ್ರಗ್ಸ್) ಯುವ ಸಮೂಹವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬಲಿ ತೆಗೆದುಕೊಳ್ಳುತ್ತಿವೆ. ಆದ್ದರಿಂದ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ಪೊಲೀಸ್ ಇಲಾಖೆಯ ಮೊಬೈಲ್ ಆ್ಯಪ್‍ಗಳನ್ನು ಬಳಸಿಕೊಳ್ಳುವ ಮೂಲಕ ಪೆಡ್ಲರ್‍ಗಳ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಮಾಹಿತಿ ನೀಡಿದವರ ವೈಯಕ್ತಿಕ ವಿವರಗಳನ್ನು ನೀಡುವುದಿಲ್ಲ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಅವರು ವ್ಯಸನ ಮುಕ್ತ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಿ ಜೀವನದಾದ್ಯಂತ ಮಾದಕ ವಸ್ತು ಮುಟ್ಟುವುದಿಲ್ಲ. ಸೇವಿಸುವುದಿಲ್ಲ. ಈ ಪಿಡುಗನ್ನು ತೊಡೆದು ಹಾಕಲು ಕುಟುಂಬದ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಕೈಜೋಡಿಸುತ್ತೇನೆ. ಮಾದಕ ವಸ್ತು ಮುಕ್ತ ಸಮಾಜ ಕಟ್ಟಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಮನೋರೋಗ ವಿಭಾಗದ ವೈದ್ಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಂದ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರೇಣುಶ್ರೀ, ಉಪನ್ಯಾಸಕರಾದ ಪ್ರೊ.ಶ್ರೀಧರ್ ಹೆಗಡೆ, ಡಾ.ಗಾಯತ್ರಿ ಎ.ಎನ್, ಡಾ.ತಳವಾರ್ ಡಿ.ಹೆಚ್., ಡಾ.ಶೈಲಶ್ರೀ, ಕೆ.ಎಂ.ಪೂಣಚ್ಚ, ಅಲೋಕ್ ಹಾಗೂ ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳು, ಮನೋರೋಗ ವಿಭಾಗದ ವೈದ್ಯಾಧಿಕಾರಿಗಳು ಇದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಲೋಚನ, ಗಾನ ನಿರೂಪಿಸಿದರು, ಸ್ವಪ್ನ, ಚೊಂದಮ್ಮ, ಲಿಖಿತ ನಾಡಗೀತೆ ಹಾಡಿದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಾಗತಿಸಿ, ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
