ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ 3 ದಿನದಿಂದ ಕೆಟ್ಟು ನಿಂತಿರುವ ಇಲೆಕ್ಟ್ರಿಕ್ ಬಸ್ಸ್

ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ 3 ದಿನದಿಂದ ಕೆಟ್ಟು ನಿಂತಿರುವ ಇಲೆಕ್ಟ್ರಿಕ್ ಬಸ್ಸ್

ವಿರಾಜಪೇಟೆ, ಜೂ. 22: ಬೆಂಗಳೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಇ-ಬಸ್ ತಾಂತ್ರಿಕ ದೋಷಕ್ಕೆ ತುತ್ತಾಗಿ 3 ದಿನಗಳಿಂದ ಗೋಣಿಕೊಪ್ಪ ಮುಖ್ಯ ರಸ್ತೆಯ ಪಂಜರಪೇಟೆ ಬಳಿ ನಿಂತಿದೆ. ಇದರಿಂದ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. 3 ದಿನದ ಹಿಂದೆ ತಾಂತ್ರಿಕ ತೊಂದರೆ ಉಂಟಾದಾಗಿನಿಂದ ಚಾಲಕ ದಿನೇಶ್ ಅವರು ಬಸ್‌ನಲ್ಲೇ ಇದ್ದು ರಿಪೇರಿಗಾಗಿ ಕಾಯುತ್ತಿದ್ದಾರೆ.

 ಬೆಂಗಳೂರಿನಿಂದ ಮೆಕ್ಯಾನಿಕ್ ಬಂದು ರಿಪೇರಿ ಮಾಡಬೇಕಿದೆ ಎಂದು ತಿಳಿದುಬಂದಿದೆ. ನೂರು ಮೀಟರ್ ದೂರದಲ್ಲೇ ರಾಜ್ಯ ಸಾರಿಗೆ ಬಸ್ ನಿಲ್ದಾಣವಿದ್ದು, ಅಲ್ಲಿ ಸಾಕಷ್ಟು ಜಾಗವಿದ್ದರೂ ಬಸ್ ಅನ್ನು ಮುಖ್ಯ ರಸ್ತೆಯಲ್ಲೇ ನಿಲ್ಲಿಸಲಾಗಿದೆ. ಇದರಿಂದ ಇತರೆ ವಾಹನಗಳ ಓಡಾಟಕ್ಕೆ ತೊಡಕಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಬಸ್ ದುರಸ್ತಿ ಮಾಡಿ ಸ್ಥಳದಿಂದ ತೆರವು ಮಾಡಬೇಕು ಎಂದು ಸ್ಥಳೀಯ ನಿವಾಸಿ ಎಂ.ಕೆ. ಅಶ್ರಫ್ ಮನವಿ ಮಾಡಿದ್ದಾರೆ.