ಮಾದಕ ವಸ್ತುಗಳ ನಿರ್ಮೂಲನೆಗೆ ಎಲ್ಲರೂ ಪಣತೊಡಬೇಕು;ಶಾಸಕ ಡಾ.ಮಂತರ್ ಗೌಡ
ಸುಂಟಿಕೊಪ್ಪ: ಸಹವಾಸ ದೋಷದಿಂದ ಆರಂಭವಾಗುವ ಕೆಲವೊಂದು ಅಭ್ಯಾಸಗಳು ಚಟವಾಗಿ ಮಾರ್ಪಟ್ಟು ಚಟ್ಟದವರೆಗೆ ಹೋಗವರೆಗೂ ನಮಗೆ ಆರಿವೆ ಆಗುವುದಿಲ್ಲ. ಅಂತಹ ಚಟಗಳಲ್ಲಿ ಮಾದಕ ವಸ್ತುಗಳ ಸೇವನೆ ಮೊದಲ ಸ್ಥಾನದಲ್ಲಿದ್ದು, ಅದನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ನಾವೆಲ್ಲರೂ ಪಣತೋಡಣ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.
ಸುಂಟಿಕೊಪ್ಪ ಸಲಾಫಿ ಮಸೀದಿ ಆವರಣದಲ್ಲಿ ಕೊಡಗು ಜಿಲ್ಲಾ ವಿಸ್ಡಂ ಇಸ್ಲಾಮಿಕ್ ಆರ್ಗನೈಷಶನ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ 'ಕುಟುಂಬ ಸಮ್ಮಿಲನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವತಃ ವೈಧ್ಯನಾಗಿರುವ ನಾನು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪಾರಿಣಾಮಗಳಿಂದ ಚಿಕಿತ್ಸೆಗೆ ಒಳಗಾಗಿರುವ ಮತ್ತು ಆಸ್ಪತ್ರೆಗೆ ಸೇರಿರುವ ಆನೇಕರನ್ನು ನೋಡಿದ್ದೇನೆ. ದುರಾದೃಷ್ಟಕರ ವಿಚಾರವೆಂದರೆ, ಒಮ್ಮೆ ರುಚಿ ನೋಡೊಣ ಎಂದು ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೆ ನಂತರ ಮಾದಕ ವಸ್ತುಗಳೇ ನಮ್ಮನ್ನು ತಿಂದು ಹಾಕುತ್ತದೆ ಎಂದು ಮಾರ್ಮಿಕವಾಗಿ ನುಡಿದ ಅವರು,
ಮಾದಕ ವಸ್ತುಗಳ ಚಟ ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಅವುಗಳ ದಾಸರನ್ನಾಗಿಸಿ ಮಾಡಿ ಬಿಡುತ್ತದೆ. ಸಣ್ಣದಾಗಿ ಶುರುವಾಗುವ ಈ ಅಭ್ಯಾಸವು ಬೃಹತ್ ಕಾಯಿಲೆಯಾಗಿ ಮಾರ್ಪಟ್ಟು ಕುಟುಂಬ ಕಂಟಕವಾಗಿ ಪರಿಣಾಮಿಸಿ ವಿನಾಶಕ್ಕೆ ನಾಂದಿ ಹಾಡುತ್ತದೆ. ಪೋಷಕರು, ಶಿಕ್ಷಕರು, ಸಮಾಜ ಸೇವಕರು ಮತ್ತು ಪೊಲೀಸರು ಈ ಬಗ್ಗೆ ತೀವ್ರ ನಿಗಾವಹಿಸಬೇಕು. ಪೊಲೀಸರು ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಬೇಕು.ಮಾದಕ ವಸ್ತುಗಳ ಸೇವನೆ ಪತ್ತೆ ಹಚ್ಚುವಿಕೆ ಹಾಗೂ ಕಾನೂನಿನ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದು ಡಾ.ಮಂತರ್ ಗೌಡ ನುಡಿದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದು, ಮಕ್ಕಳು ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಟುಂಬದ ಸಾಮರಸ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಆಸಾಮಾನ್ಯ ಬದಲಾವಣೆಗಳನ್ನು ಕಾಣುತ್ತಿದ್ದು, ಈಗಿನ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ ಅಥವಾ ಆಗ ತಾನೇ ಕೆಲಸಕ್ಕೆ ಸೇರಿದವರು ನಾವು ನಮಗೆ ಇಷ್ಟ ಬಂದ ಯುವಕ ಅಥವಾ ಯುವತಿಯೊಂದಿಗೆ ಸಂಬಂದಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಸಮಾಜ ಎಲ್ಲಿಗೆ ತಲುಪಿದೆಯೆಂದು ನಾವು ಅಲೋಚಿಸಬೇಕಾಗಿದೆ. ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ರೌಡಿಶೀಟರ್‌ಗಳು, ಕೊಲೆಗಡುಕರು, ಇನ್ನಿತರ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿರುವವರು ಜೈಲಿಗೆ ಹೋಗಿಬಂದವರು ಸನ್ಮಾನ ಜೈಕಾರ ಮತ್ತು ಸಮಾಜ ಸುಧಾರಕರೆಂದು ಬಿಂಬಿಸಲ್ಪಡುತ್ತಿದ್ದಾರೆ ಎಂದು ವಿಷಾಧಿಸಿದರು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಶ್ರಮ ವಹಿಸಿ ಸಾಕುತ್ತಾರೆ. ತಾವು ಸಾಧಿಸಲಾಗದನ್ನು ತಮ್ಮ ಮಕ್ಕಳು ಸಾಧಿಸಲೆಂದು ಅವರನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಾರೆ.ಆದರೆ ಮಕ್ಕಳು ತಂದೆ ತಾಯಿಗಳ ಕನಸ್ಸಿಗೆ ಕೊಳ್ಳಿಇಟ್ಟು ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ.ನಾವು ಸ್ವತಃ ಬದಲಾಗುವವರೆಗೆ ಸೃಷ್ಟಿಕರ್ತನು ಕೂಡ ನಮ್ಮನ್ನು ಬದಲಾಯಿಸುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಸೈನ್ ಸಲಾಫಿ ಶಾರ್ಜ, ಶಿಯಾಬ್ ಎಡತ್ತಾರ, ಡಾ.ಅಬ್ದುಲ್ ಬಸಿಲ್, ಅನಿಲ್ ತಲಾಪಾಡಿ ಮುಖ್ಯ ಭಾಷಣಕಾರರಾಗಿ ಡ್ರಗ್ಸ್ ಮುಕ್ತರಾಗೋಣ, ನಮ್ಮ ಕುಟುಂಬಗಳನ್ನು ರಕ್ಷಿಸೋಣ ಎಂಬ ವಿಷಯದ ಬಗ್ಗೆ ಪ್ರವಚನಗಳನ್ನು ನೀಡಿದರು.
ಕಾರ್ಯಕ್ರಮದ ಸಂಘಟಕರಾದ ಶಬ್ಬೀರ್, ಹೆಚ್.ಯು.ರಫೀಕ್‌ಖಾನ್ ಅವರು ಡಾ.ಮಂತರ್‌ಗೌಡ ಮತ್ತು ವಿ.ಪಿ.ಶಶಿಧರ್ ಅವರನ್ನು ಗೌರವಿಸಿದರು.
ವೇದಿಕೆಯಲ್ಲಿ ವಿಸ್ಡಂ ಇಸ್ಲಮಿಕ್ ಆರ್ಗನೈಷಶನ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
