ಮಾಜಿ ಶಾಸಕನ ಪುತ್ರನ ಕೊಲೆ ಪ್ರಕರಣ;ಅನೈತಿಕ ಸಂಬಂಧಕ್ಕೆ ಜೀವ ಕಳೆದುಕೊಂಡ ಮಾಜಿ MLA ಮಗ
ಧಾರವಾಡ: ರಾಮಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಪುತ್ರನ ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು. ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ಮಾಹಿತಿ ನೀಡಿದರು.
ಧಾರವಾಡ ಜಿಲ್ಲೆಯ ರಾಮಾಪುರ ಬಳಿ ರಾಜು ಬೋಳಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದ ಮೃತ್ಯುಂಜಯ, ಕೊಲೆಗೆ ಸಹಕರಿಸಿದ ಬಸವರಾಜ, ಮುನಿರಾ ಎಂಬ ಮಹಿಳೆ ಬಂಧಿತರು, ಹಾಗೂ ಆಕೆಯ ಅಪ್ರಾಪ್ತ ಮಗ ಕಾನೂನು ಸಂಘರ್ಷಕ್ಕೆ ಒಳಗಾದವರು ಎಂದು ಎಸ್ಪಿ ತಿಳಿಸಿದರು.
2 ವರ್ಷದಿಂದ ಮೃತ ರಾಜು ಬೋಳಶೆಟ್ಟಿಗೆ ಬಂಧಿತ ಮಹಿಳೆ ಜೊತೆ ಅನೈತಿಕ ಸಂಬಂಧವಿತ್ತು. ಈ ಮಧ್ಯೆ ರಾಜು ಹಾಗೂ ಮಹಿಳೆಯ ಸಂಬಂಧದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ಆ ಮಹಿಳೆ, ಆಕೆಯ ಮಗ ಮತ್ತು ಆರೋಪಿ ಮೃತ್ಯುಂಜಯ ಅವರು ಈ ಕೊಲೆಗೆ ಪ್ಲಾನ್ ಮಾಡಿದ್ದರು. ರಾಜುವೇ ಮಹಿಳೆಯನ್ನು ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ತೋಟದ ಮನೆಯ ಆತನ ಶೆಡ್ಗೆ ಕರೆದುಕೊಂಡು ಬಂದಿದ್ದನು ಎಂದು ಅವರು ಹೇಳಿದರು.
ಇತ್ತ ಈ ಮಹಿಳೆಯ ಮಾರ್ಗದರ್ಶನದಂತೆ ಆಕೆಯ ಮಗ ಹಾಗೂ ಮೃತ್ಯುಂಜಯ ಇವರಿಬ್ಬರನ್ನು ಫಾಲೋ ಮಾಡಿಕೊಂಡು ಶೆಡ್ಗೆ ಬಂದಿದ್ದರು. ಇಲ್ಲಿ ಇವರೆಲ್ಲ ಭೇಟಿಯಾಗಿದ್ದರು. ಈ ವೇಳೆ ಜಗಳ ನಡೆದು ಚಾಕು ಹಾಗೂ ಸಲಾಕೆಯಿಂದ ರಾಜುವನ್ನು ಕೊಲೆ ಮಾಡಲಾಗಿದೆ. ಬಳಿಕ ಧಾರವಾಡದ ರಾಮಪುರಕ್ಕೆ ದೇಹವನ್ನು ತಂದು ಸುಟ್ಟು ಹಾಕಿದ್ದಾರೆ ಎಂದು ಎಸ್ಪಿ ವಿವರಿಸಿದರು.
ಪ್ರಕರಣದಲ್ಲಿ 12 ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದೇವೆ. ಆರೋಪಿ ಮೃತ್ಯುಂಜಯನಿಗೆ ರಾಮಾಪುರ ಊರಿನ ಬಗ್ಗೆ ಮಾಹಿತಿ ಇತ್ತು. ಅವರ ಪ್ಲಾನ್ನಲ್ಲಿ ಮೃತದೇಹವನ್ನು ವಿಲೇವಾರಿ ಮಾಡುವ ಬಗ್ಗೆ ಯೋಚನೆ ಇರಲಿಲ್ಲ. ಕೊಲೆ ಆದ ಮೇಲೆ ಗಾಬರಿಗೊಂಡು ಸುಟ್ಟು ಹಾಕಿದ್ದಾರೆ. ತನಿಖೆ ವೇಳೆ ರಕ್ತದ ಮಣ್ಣು ದೊರಕಿದ್ದು ಅದನ್ನು FSLಗೆ ಪರಿಶೀಲನೆಗೆ ಕಳುಹಿಸಿದ್ದೇವೆ ಎಂದರು.
ಬಂಧಿತ ಮಹಿಳೆ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಈ ಮಹಿಳೆಯ ಪತಿ ಸುಮಾರು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾರೆ. ಆರೋಪಿ ಮೃತ್ಯುಂಜಯ ಹಾಗೂ ಮಹಿಳೆ ಸ್ನೇಹಿತರಾಗಿದ್ದರು. ಇವರ ಸಂಬಂಧದ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಕೊಲೆಗೀಡಾದ ರಾಜು ಹಾಗೂ ಮಹಿಳೆಯ ಸಂಬಂಧಕ್ಕೆ ಮೃತ್ಯುಂಜಯನಿಗೆ ವಿರೋಧವಿತ್ತು.
ಹಂತಕರು ಧಾರವಾಡದಲ್ಲಿ 5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. 4 ಜನರೂ ಹತ್ಯೆಯ ಬಳಿಕ ಒಂದೇ ಬೈಕ್ನಲ್ಲಿ ತೆರಳಿದ್ದರು ಎಂದು ತಿಳಿಸಿದರು.