ಬಾಲಕಿ ಕಣ್ಣೆದುರೇ ತಂದೆಯ ಹತ್ಯೆ
ತುಮಕೂರು, ಜ.16: 12 ವರ್ಷದ ಬಾಲಕಿಯ ಕಣ್ಣೆದುರೇ ನಡೆದ ತಂದೆಯ ಬರ್ಬರ ಹತ್ಯೆ ಪ್ರಕರಣವನ್ನು ತುಮಕೂರು ಪೊಲೀಸರು 48 ಗಂಟೆಗಳೊಳಗೆ ಭೇದಿಸಿದ್ದಾರೆ. ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಮಂಜುನಾಥ್ ಎಂಬವರು ಮಕ್ಕಳೊಂದಿಗೆ ಮನೆಯ ಮುಂದೆ ನಿಂತಿದ್ದ ವೇಳೆ, ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ಈ ಘಟನೆ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು.
ಪೊಲೀಸರ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಮೂಲತಃ ತಮಿಳುನಾಡಿನವರಾಗಿದ್ದು, ಪ್ರಸ್ತುತ ಬೆಂಗಳೂರಿನ ಆನೆಕಲ್ ಸಮೀಪದ ಅತ್ತಿಬೆಲೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಇವರು ವೃತ್ತಿಪರ ಕಳ್ಳರಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಜನವರಿ 11ರ ರಾತ್ರಿ ಸುಮಾರು 9 ಗಂಟೆಗೆ ಗ್ಲೌಸ್ ಹಾಗೂ ಮಾಸ್ಕ್ ಧರಿಸಿ ಮಂಜುನಾಥ್ ಮನೆಯ ಅಂಗಡಿಗೆ ಕಳ್ಳತನಕ್ಕೆ ಬಂದಿದ್ದ ಆರೋಪಿಗಳು, ಅಂಗಡಿ ಬಾಗಿಲು ತೆರೆಯಲು ನಿರಾಕರಿಸಿದ ಮಂಜುನಾಥ್ ಅವರನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಘಟನೆಯನ್ನು ಅವರ 12 ವರ್ಷದ ಪುತ್ರಿ ಕಣ್ಣಾರೆ ಕಂಡಿದ್ದಾಳೆ.
ಕಾರಿನಿಂದಲೇ ಸಿಕ್ಕ ಸುಳಿವು;
ಘಟನೆ ಬಳಿಕ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ನಡುವೆ, ಶಿವಮೊಗ್ಗದ ವಿನೋಭನಗರ ಠಾಣೆಗೆ ಬೇಕಾಗಿದ್ದ ಕಳ್ಳರ ಗ್ಯಾಂಗ್ ಬಳಸುತ್ತಿದ್ದ ಕಾರು ಕೊಲೆ ನಡೆದ ಪ್ರದೇಶದಲ್ಲಿ ಸಂಚರಿಸಿದ್ದ ಮಾಹಿತಿ ಲಭ್ಯವಾಯಿತು. ಅದೇ ಕಾರು ಶಿರಾ ತಾಲೂಕಿನ ಮನೆಗಳ್ಳತನಕ್ಕೂ ಬಳಸಲಾಗಿತ್ತು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಕಾರಿನ ಜಾಡು ಹಿಡಿದು ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದರು.
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, 2018ರಲ್ಲಿ ಆನೆಕಲ್ ಸಮೀಪ ನಡೆದಿದ್ದ ಮತ್ತೊಂದು ಕೊಲೆ ಪ್ರಕರಣದಲ್ಲಿಯೂ ಇವರ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.