State News

ಮಧ್ಯರಾತ್ರಿ ಮಗಳ ಜೀವ ಉಳಿಸಲು ಇಡೀ ಹುಬ್ಬಳ್ಳಿ ಸುತ್ತಿದ ತಂದೆ: ಕಿಮ್ಸ್‌ನಲ್ಲಿ ಮತ್ತೆ ನಿರ್ಲಕ್ಷ್ಯ ಆರೋಪ

admincoorgdaily

ಹುಬ್ಬಳ್ಳಿ, ಅ. 27: ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮತ್ತೊಮ್ಮೆ ಮನಕಲಕುವ ಘಟನೆ ನಡೆದಿದೆ. ಸಾವು-ಬದುಕಿನ ಹೋರಾಟದಲ್ಲಿದ್ದ ಮಗಳ ಜೀವ ಉಳಿಸಲು ತಂದೆಯೊಬ್ಬರು ಮಧ್ಯರಾತ್ರಿ ಇಡೀ ಹುಬ್ಬಳ್ಳಿ ನಗರ ಅಲೆದಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗದಗ ಜಿಲ್ಲೆಯ ನರಗುಂದದ ದಾವಲಸಾಬ್ ಅವರ ಒಂದೂವರೆ ವರ್ಷದ ಮಗಳು ತಸ್ಮೀಯಾ ಮನೆ ಮುಂದೆ ಇದ್ದ ವಿಷಕಾರಿ ಗುಲಗಂಜಿ ಎಲೆಗಳನ್ನು ತಿಂದ ಪರಿಣಾಮವಾಗಿ ಅಸ್ವಸ್ಥಳಾಗಿದ್ದಳು. ಪ್ರಾಥಮಿಕ ಚಿಕಿತ್ಸೆ ಬಳಿಕ ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.

ಅಕ್ಟೋಬರ್ 25ರ ರಾತ್ರಿ ಕಿಮ್ಸ್‌ಗೆ ಕರೆತಂದ ಬಳಿಕ ಬಾಲಕಿಯನ್ನು ತಪಾಸಣೆ ಮಾಡಿದ ವೈದ್ಯರು “ಪೈಸೋಸ್ಟಿಗಮನ್” ಎಂಬ ಇಂಜೆಕ್ಷನ್ ಅಗತ್ಯವಿದೆ ಎಂದು ಹೇಳಿ, ಅದು ಕಿಮ್ಸ್‌ನಲ್ಲಿ ಲಭ್ಯವಿಲ್ಲವೆಂದು ತಿಳಿಸಿ ಹೊರಗಿನಿಂದ ತರಲು ಹೇಳಿದರೆಂಬ ಆರೋಪ ಕೇಳಿಬಂದಿದೆ. ಮಗಳ ಜೀವ ಉಳಿಸಲು ದಾವಲಸಾಬ್ ಮಧ್ಯರಾತ್ರಿ 12ರಿಂದ 2ರವರೆಗೆ ಅನೇಕ ಮೆಡಿಕಲ್ ಶಾಪ್‌ಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅಲೆದಾಡಿದ್ದಾರೆ.

ವಾಹನ ಸೌಲಭ್ಯವಿಲ್ಲದೇ ಹತ್ತಾರು ಕಿಲೋಮೀಟರ್ ನಡೆದು, ಓಡಿ ಇಂಜೆಕ್ಷನ್ ಹುಡುಕಿದ ತಂದೆಯ ಕಣ್ಣೀರಿನ ಕಥೆ ಸದ್ಯ ಎಲ್ಲರ ಹೃದಯ ಮುಟ್ಟಿದೆ. ಈ ವೇಳೆಯಲ್ಲಿ ಶ್ರೀಧರ್ ಎಂಬ ಯುವಕ ದಾವಲಸಾಬ್‌ರನ್ನು ಗಮನಿಸಿ ಮಾತನಾಡಿ ವಿಡಿಯೋ ಚಿತ್ರೀಕರಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀಧರ್ ಅವರು ತಮ್ಮ ಬೈಕ್‌ನಲ್ಲಿ ತಂದೆಯನ್ನು ಹತ್ತಿಸಿಕೊಂಡು ಹಲವಾರು ಮೆಡಿಕಲ್ ಶಾಪ್‌ಗಳಿಗೆ ತೆರಳಿದರೂ ಸಹ ಇಂಜೆಕ್ಷನ್ ದೊರಕಲಿಲ್ಲ.

ಕೊನೆಯಲ್ಲಿ ವೈದ್ಯರು ಪರ್ಯಾಯವಾಗಿ ನಿಯೋಸ್ಟಿಗಮನ್ ಇಂಜೆಕ್ಷನ್ ನೀಡಿ ಬಾಲಕಿಗೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, “ಪೈಸೋಸ್ಟಿಗಮನ್ ನಮ್ಮ ಆಸ್ಪತ್ರೆಯ ಔಷಧಿ ಪಟ್ಟಿಯಲ್ಲೇ ಇಲ್ಲ. ಅದಕ್ಕೆ ಪರ್ಯಾಯವಾಗಿ ನಿಯೋಸ್ಟಿಗಮನ್ ಸ್ಟಾಕ್‌ನಲ್ಲಿ ಲಭ್ಯವಿದ್ದು, ಅದನ್ನೇ ನೀಡಲಾಗಿದೆ. ನಮ್ಮ ವೈದ್ಯರು ಹೊರಗಿನಿಂದ ತರಲು ಸೂಚಿಸಿಲ್ಲ. ರೋಗಿಯ ಸಂಬಂಧಿಗಳು ಗೂಗಲ್‌ನಲ್ಲಿ ಹುಡುಕಿ ತರಲು ಪ್ರಯತ್ನಿಸಿದಂತಾಗಿದೆ,” ಎಂದು ಸಮಜಾಯಿಷಿ ನೀಡಿದ್ದಾರೆ.