ಮಗಳ ಕಣ್ಣೆದುರೇ ತಂದೆಯ ಭೀಕರ ಹತ್ಯೆ!

Jan 13, 2026 - 00:33
 0  1.7k
ಮಗಳ ಕಣ್ಣೆದುರೇ ತಂದೆಯ ಭೀಕರ ಹತ್ಯೆ!
ಪ್ರಾತಿನಿಧಿಕ ಚಿತ್ರ

ತುಮಕೂರು, ಜ. 12: ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಮಗಳ ಕಣ್ಣೆದುರೇ ತಂದೆಯನ್ನು ದುಷ್ಕರ್ಮಿಗಳು ಭೀಕರ ಹತ್ಯೆಗೈದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಕೃತ್ಯದಿಂದ ಇಡೀ ಗ್ರಾಮ ಬೆಚ್ಚಿಬಿದ್ದಿದೆ.

ಮೃತ ವ್ಯಕ್ತಿಯನ್ನು ಕೆಂಕೆರೆ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರು ದಿನಸಿ ಅಂಗಡಿ ಹಾಗೂ ಟೆಂಟ್‌ ಹೌಸ್‌ ವ್ಯವಹಾರ ನಡೆಸುತ್ತಿದ್ದು, ಕುಟುಂಬದೊಂದಿಗೆ ಊರಿನ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮಂಜುನಾಥ್ ತಮ್ಮಿಬ್ಬರು ಮಕ್ಕಳೊಂದಿಗೆ ಟೆಂಟ್‌ ಹೌಸ್‌ ಮುಂದೆ ಮಾತನಾಡುತ್ತ ಕುಳಿತಿದ್ದ ವೇಳೆ ನಾಲ್ಕೈದು ಜನರ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಒಬ್ಬ ಮಗಳು ಮನೆಯೊಳಗೆ ಓಡಿ ತಪ್ಪಿಸಿಕೊಂಡರೆ, ಮತ್ತೊಬ್ಬಳನ್ನು ದುಷ್ಕರ್ಮಿಗಳು ಹಿಡಿದು ಕಿರುಚದಂತೆ ಬಾಯಿ ಮುಚ್ಚಿಸಿದ್ದಾರೆ. ನಂತರ ಚಾಕುವಿನಿಂದ ಎದೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಮಂಜುನಾಥ್ ಅವರನ್ನು ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.

ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡ ಮಗಳು ತೀವ್ರ ಆಘಾತಕ್ಕೊಳಗಾಗಿದ್ದು, ಬಳಿಕ ಆಕೆ ಮನೆಗೆ ತೆರಳಿ ತಾಯಿಗೆ ವಿಷಯ ತಿಳಿಸಿದ್ದಾಳೆ. ಮಾಹಿತಿ ಪಡೆದ ಹುಳಿಯಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮುಖಕ್ಕೆ ಮಾಸ್ಕ್‌ ಹಾಗೂ ಕೈಗೆ ಗ್ಲೌಸ್‌ ಧರಿಸಿಕೊಂಡು ಬಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಸುಳಿವುಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 4
Wow Wow 0