ಮೈಸೂರಿನಲ್ಲಿ ಭ್ರೂಣ ಲಿಂಗ ಜಾಲ ಪತ್ತೆ: ಏಳು ಮಂದಿಯ ವಿರುದ್ಧ ಎಫ್‌ಐಆರ್, ಐವರ ಬಂಧನ

Oct 23, 2025 - 20:55
Oct 23, 2025 - 21:33
 0  1.3k
ಮೈಸೂರಿನಲ್ಲಿ ಭ್ರೂಣ ಲಿಂಗ ಜಾಲ ಪತ್ತೆ: ಏಳು ಮಂದಿಯ ವಿರುದ್ಧ ಎಫ್‌ಐಆರ್, ಐವರ ಬಂಧನ
Photo credit:Etv Bharath

ಮೈಸೂರು: ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಕೃತ್ಯದಲ್ಲಿ ತೊಡಗಿದ್ದ ಜಾಲವನ್ನು ಮೈಸೂರಿನಲ್ಲಿ ಪತ್ತೆ ಹಚ್ಚಲಾಗಿದೆ. ಆರೋಗ್ಯ ಇಲಾಖೆ ಹಾಗೂ ವರುಣಾ ಠಾಣೆ ಪೊಲೀಸರು ಜಂಟಿಯಾಗಿ ನಡೆಸಿದ ರಹಸ್ಯ ದಾಳಿಯಲ್ಲಿ ಈ ಕುಕೃತ್ಯ ಬಯಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಹನುಗನಹಳ್ಳಿ ಹೆದ್ದಾರಿ ಬಳಿಯ ಫಾರಂ ಹೌಸ್‌ನಲ್ಲಿ ಬುಧವಾರ ಬೆಳಿಗ್ಗೆ ದಾಳಿ ನಡೆಸಲಾಯಿತು. ಸ್ಥಳದಲ್ಲಿ ಗರ್ಭಿಣಿಯರಿಗೆ ಲಿಂಗ ಪತ್ತೆ ಕಾರ್ಯ ನಡೆಯುತ್ತಿದ್ದುದನ್ನು ಪತ್ತೆ ಹಚ್ಚಿ, ಏಳು ಮಂದಿಯ ವಿರುದ್ಧ ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿಸಿಪಿಎನ್‌ಡಿಟಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಯಿತು.

ಈ ಪೈಕಿ ಮೈಸೂರಿನ ಶ್ಯಾಮಲಿ, ಕಾರ್ತಿಕ್, ಸ್ವಾಮಿ, ಗೋವಿಂದರಾಜು ಮತ್ತು ಶಿವಕುಮಾರ್ ಬಂಧಿತರಾಗಿದ್ದು, ಪುಟ್ಟರಾಜು ಮತ್ತು ಹರೀಶ್ ನಾಯಕ ಪರಾರಿಯಾಗಿದ್ದಾರೆ. ಬಂಧಿತರಿಂದ ಸ್ಕ್ಯಾನಿಂಗ್ ಯಂತ್ರ, ನಗದು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಗ್ರಾಮೀಣ ಭಾಗದ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿಕೊಂಡು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು. ಹೆಣ್ಣು ಭ್ರೂಣ ಪತ್ತೆಯಾದಲ್ಲಿ ಗರ್ಭಪಾತ ಮಾಡಿಸುತ್ತಿದ್ದರು ಎಂಬ ಮಾಹಿತಿಯೂ ಹೊರಬಂದಿದೆ.

ಈ ಕಾರ್ಯಾಚರಣೆಯಲ್ಲಿ ಪಿಸಿಪಿಎನ್‌ಡಿಟಿ ಉಪನಿರ್ದೇಶಕ ವಿವೇಕ್ ದೊರೈ, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಕುಮಾರ್, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ. ಕುಮಾರಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ ಹಾಗೂ ಸಿಬ್ಬಂದಿಗಳಾದ ಅನಿಲ್ ಪಿ. ಥಾಪಸ್, ಎನ್. ಅರುಣ್ ಕುಮಾರ್, ಬಿ. ಮಂಗಳಾ ಮತ್ತು ಪುಟ್ಟಸಿದ್ದಮ್ಮ ಭಾಗವಹಿಸಿದ್ದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ. ಕುಮಾರಸ್ವಾಮಿ, "ಈ ಜಾಲದ ಚಟುವಟಿಕೆಗಳ ಮೇಲೆ ಕಳೆದ ಎರಡು ತಿಂಗಳಿಂದ ನಿಗಾವಹಿಸಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಹಿಂದೆ ಇನ್ನೂ ಯಾರಾದರೂ ಇದ್ದರೆ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದ್ದಾರೆ.

 ಘಟನೆಯ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿ, “ಹೆಣ್ಣು ಭ್ರೂಣ ಹತ್ಯೆ ಒಂದು ಗಂಭೀರ ಸಾಮಾಜಿಕ ಪಿಡುಗು. ಭ್ರೂಣ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಆರೋಗ್ಯ ಇಲಾಖೆ ನಿರಂತರವಾಗಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಹೋರಾಟ ಮುಂದುವರಿಸುತ್ತಿದೆ,” ಎಂದು ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 3
Wow Wow 0