ಸರ್ಕಾರದ ಐದು ಗ್ಯಾರಂಟಿಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ:ಶಾಸಕ ಡಾ.ಮಂತರ್ ಗೌಡ

ಸರ್ಕಾರದ ಐದು ಗ್ಯಾರಂಟಿಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ:ಶಾಸಕ ಡಾ.ಮಂತರ್ ಗೌಡ

ಸೋಮಮವಾರಪೇಟೆ:ಸರ್ಕಾರದ ಐದು ಗ್ಯಾರೆಂಟಿಗಳು ಜನಕಲ್ಯಾಣ ಯೋಜನೆಗಳಾಗಿದ್ದು, ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು. ಸೋಮವಾರಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊಸ ಮಾರ್ಗದಲ್ಲಿ ಸಂಚರಿಸುವ ಮೂರು ಬಸ್‌ಗಳ ಸಂಚಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಐದು ಗ್ಯಾರೆಂಟಿಗಳೊಂದಿಗೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೂ ಹೆಚ್ಚಿನ ಹಣವನ್ನು ಸರ್ಕಾರ ಬಿಡುಗಡೆಗೊಳಿಸುತ್ತಿದೆ ಅದು ಜನರ ಅಭಿವೃದ್ಧಿಗೆ ನೀಡುವ ಅನುದಾನವಾಗಿದೆ. ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆ ಶೇ 100 ರಷ್ಟು ಯಶಸ್ವಿಯಾಗಲು ಗ್ಯಾರೆಂಟಿ ಅನುಷ್ಠಾನ ಸಮಿತಿಯವರು ಶ್ರಮಪಡುತ್ತಿದ್ದಾರೆ ಎಂದರು. ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ಕೊಡಗಿನಲ್ಲಿ 500 ಕೋಟಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಸರ್ಕಾರ ಹಣವನ್ನು ಕೆಎಸ್‌ಆರ್‌ಟಿಸಿಗೆ ಭರಿಸಿದೆ ಎಂದು ಹೇಳಿದರು. ಮಳೆಗಾಲದಲ್ಲಿ ಹಾರಂಗಿ ಡ್ಯಾಂನ ನೀರನ್ನು ಬಿಟ್ಟಾಗ ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಕೆಲ ದಿನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ನನ್ನ ಮನವಿ ಮೇರೆಗೆ ನೂತನ ಸೇತುವೆಗೆ ರಾಜ್ಯ ಸರ್ಕಾರ 36 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇನ್ನು ನಾಲೆಗಳ ದುರಸ್ತಿಗೆ 49ಕೋಟಿ ರೂ.ಗಳಿಗೆ ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದು ಹೇಳಿದರು. ಮೂರು ಬಸ್‌ಗಳ ಜೊತೆಗೆ ಹೆಚ್ಚಿನ ಬಸ್‌ಗಳಿಗಾಗಿ ಸಾರಿಗೆ ಮಂತ್ರಿಗಗಳಿಗೆ ಬೇಡಿಕೆ ಇಡಲಾಗಿದೆ. ಬೆಂಗಳೂರಿಗೆ ತೆರಳಲು ಎಲೆಕ್ಟಿçಕ್ ಬಸ್‌ಗಳನ್ನು ನೀಡುವ ಭರವಸೆಯನ್ನು ಸಚಿವ ರಾಮಲಿಂಗರೆಡ್ಡಿ ಅವರು ಭರವಸೆ ನೀಡಿದ್ದಾರೆ. ಶಾಂತಳ್ಳಿ, ಕೂತಿ, ಮಾರ್ಗವಾಗಿ ಸುಬ್ರಮಣ್ಯಕ್ಕೆ ಹಾಗು ಹಾನಗಲ್ಲು, ತಲ್ತಾರೆ ಮಾರ್ಗವಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗು ಡಾ.ಮಂತರ್‌ಗೌಡ ಅವರು ಶಾಸಕರಾದ ಮೇಲೆ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭವಾಗಿದೆ. ಶಾಸಕ ಮಂತರ್‌ಗೌಡ ಅವರ ಪ್ರಯತ್ನದ ಫಲವಾಗಿ ಮಡಿಕೇರಿಯಿಂದ ಸಕಲೇಶಪುರ ದೋಣಿಗಲ್ ತನಕ ರಾಜ್ಯ ಹೆದ್ದಾರಿಗೆ 970 ಕೋಟಿ ರೂ.ಹಣ ಬಿಡುಗಡೆಯ ಹಂತದಲ್ಲಿದೆ. ಜನರ ಹಲವು ದಶಕಗಳ ಬೇಡಿಕೆಯಂತೆ ಕುಶಾಲನಗರ ಬಸ್ ಡಿಪೋ ಹಾಗು ಶನಿವಾರಸಂತೆಯಲ್ಲಿ ಬಸ್ ನಿಲ್ದಾಣಕ್ಕೆ ಹಣ ಬಿಡುಗಡೆಯಾಗಿದೆ.

ಕಾಂಗ್ರೆಸ್ ಮುಖಂಡರಾದ ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಶೀಲಾ ಡಿಸೋಜ, ಎಚ್.ಆರ್.ಸುರೇಶ್, ಕೆ.ಎ.ಆದಂ, ಎಂ.ಎ.ರುಬಿನಾ, ತೆನ್ನಿರ ಮೈನಾ, ಬಿ.ಇ.ಜಯೇಂದ್ರ, ಡಿ.ಯು.ಕಿರಣ್, ವಿ.ಎ.ಲಾರೆನ್ಸ್, ಎಸ್.ಎಂ.ಡಿಸಿಲ್ವಾ, ಸುಶೀಲಾ ಹಾನಗಲ್, ಪಾವನ, ಉಲ್ಲಾಸ್, ಮಡಿಕೇರಿ ಘಟಕದ ಸಂಚಾರಿ ಅಧೀಕ್ಷಕ ಈರಸಪ್ಪ, ಸಂಚಾರಿ ನಿಯಂತ್ರಕ ಕೆ.ಸಿ.ಸುಬ್ರಮಣಿ ಇದ್ದರು.