ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲಿಸಿ: ದಿನಕರ ಶೆಟ್ಟಿ

ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲಿಸಿ: ದಿನಕರ ಶೆಟ್ಟಿ

ಮಡಿಕೇರಿ:-ನಗರದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಅಧಿಕಾರಿಗಳ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಸಾರ್ವಜನಿಕರಿಂದ 6 ಅರ್ಜಿಗಳು ಸಲ್ಲಿಕೆಯಾದವು. ಕಂದಾಯ, ಅರಣ್ಯ, ಭೂ ದಾಖಲೆಗಳು ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಪೊಲೀಸ್ ಉಪ ಅಧೀಕ್ಷಕರಾದ ದಿನಕರ ಶೆಟ್ಟಿ ಅವರು ದೂರು ಅರ್ಜಿ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕರಿಂದ ಸಲ್ಲಿಕೆಯಾದ 6 ಅರ್ಜಿಗಳಿಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸರ್ಕಾರಿ ನೌಕರರು ಸ್ಪಂದಿಸುವಂತಾಗಬೇಕು. ಆಗದಿರುವ ಕೆಲಸಕ್ಕೆ ಹಿಂಬರಹ ನೀಡುವಂತಾಗಬೇಕು ಎಂದು ನಿರ್ದೇಶನ ನೀಡಿದರು.

 ಸರ್ಕಾರಿ ಕೆಲಸ ಸಾರ್ವಜನಿಕರ ಕೆಲಸವಾಗಿದ್ದು, ಅದನ್ನು ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ದಿನಕರ ಶೆಟ್ಟಿ ಅವರು ಎಚ್ಚರಿಸಿದರು. ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳಿಗೆ ಒಂದು ಅಥವಾ ಎರಡು ವರ್ಷವಾದರೂ ಬಗೆಹರಿಸಿಲ್ಲ.

ಹೀಗೆ ಆದರೆ ಹೇಗೆ ಎಂದು ಪ್ರಶ್ನಿಸಿದರು. ಪ್ರತಿಯೊಬ್ಬ ಸರ್ಕಾರಿ ನೌಕರರು ಗುರುತಿನ ಚೀಟಿ ಇರಬೇಕು. ಚಲನವಲನ ವಹಿ ಬರೆಯಬೇಕು. ರಜೆ ಅಥವಾ ಕೇಂದ್ರ ಸ್ಥಾನದಿಂದ ಹೊರ ಹೋಗಿದ್ದಲ್ಲಿ ಸಂಬಂಧಪಟ್ಟ ಪತ್ರ ಇರಬೇಕು. ಅವರ ಪರವಾಗಿ ಬರುವವರಿಗೆ ಸಭೆಗೆ ನಿಯೋಜನೆ ಮಾಡಿರುವ ಬಗ್ಗೆ ಪತ್ರ ಇರಬೇಕು ಎಂದು ನಿರ್ದೇಶನ ನೀಡಿದರು. ಕೆಲಸ ಆಗದಿದ್ದಲ್ಲಿ 15 ದಿನದ ನಂತರ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ದೂರು ಸಲ್ಲಿಸಿದವರಿಗೆ ಲೋಕಾಯುಕ್ತ ಉಪ ಅಧೀಕ್ಷಕರು ಸಲಹೆ ಮಾಡಿದರು. 

ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ವೀಣಾ, ತಹಶೀಲ್ದಾರ್ ಶ್ರೀಧರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.