ಕೊಡಗಿನಿಂದ ಕಳ್ಳ ಸಾಗಾಟ ಮಾಡುತಿದ್ದ 28 ಲಕ್ಷ ರೂ ಮೌಲ್ಯದ ಬೀಟಿ ಮರ ಸಹಿತ ಲಾರಿ ವಶಪಡಿಸಿಕೊಂಡ ಅರಣ್ಯ ಇಲಾಖೆ

ಕೊಡಗಿನಿಂದ  ಕಳ್ಳ ಸಾಗಾಟ ಮಾಡುತಿದ್ದ 28 ಲಕ್ಷ ರೂ ಮೌಲ್ಯದ  ಬೀಟಿ ಮರ ಸಹಿತ ಲಾರಿ ವಶಪಡಿಸಿಕೊಂಡ ಅರಣ್ಯ ಇಲಾಖೆ

ಕೋವರ್‌ ಕೊಲ್ಲಿ ಇಂದ್ರೇಶ್‌

ಮೈಸೂರು: ಜಿಲ್ಲೆಯ ವೀರಾಜಪೇಟೆ ಅರಣ್ಯ ವಿಭಾಗದ ಪ್ರದೇಶಗಳಿಂದ ಬೀಟಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದು, ಭಾರೀ ಮೌಲ್ಯದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.

ಮೂಲತಃ ಕೇರಳ ರಾಜ್ಯದ ಮಲಪುರಂನ ಲಾರಿ ಮಾಲೀಕ ಕಂ ಚಾಲಕ ಅಬ್ದುಲ್ ಶುಕೂರ್ ಬಂಧಿತ ಆರೋಪಿ ಆಗಿದ್ದು . ಲಾರಿಯಲ್ಲಿದ್ದ ಸುಮಾರು 30 ಲಕ್ಷ ರೂ. ಬೆಲೆ ಬಾಳುವ 45 ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಗಿನಿಂದ ಲಾರಿಯಲ್ಲಿ ಕಾಫಿ ಹಾಗೂ ಮರದ ಹೊಟ್ಟು ತುಂಬಿದ ಮೂಟೆಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನಿಟ್ಟು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಣಸೂರಿನ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಕಿರುಬನಂತನ್, ಎಸಿಎಫ್ ಮಹದೇವಯ್ಯರ ಮಾರ್ಗದರ್ಶನದಲ್ಲಿ ಹುಣಸೂರು ಆರ್‌ಎಫ್‌ಓ ಸಂತೋಷ್ ಎಂ. ಹೂಗಾರ್ ನೇತೃತ್ವದ ತಂಡ ಹುಣಸೂರು - ಹೆಚ್. ಡಿ. ಕೋಟೆ ಮುಖ್ಯರಸ್ತೆಯ ಆಜಾದ್ ನಗರದ ಪೆಟ್ರೋಲ್ ಬಂಕ್ ಬಳಿ ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದ ವೇಳೆ ಮರದ ದಿಮ್ಮಿಗಳಿರುವುದು ಪತ್ತೆಯಾಗಿದೆ. ನಂತರ ಲಾರಿಯನ್ನು ಜಪ್ತಿ ಮಾಡಿ, ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಸಹಿತ ಆರೋಪಿ ಅಬ್ದುಲ್ ಶುಕೂರ್‌ನನ್ನು ವಶಕ್ಕೆ ಪಡೆದಿದ್ದಾರೆ.

    ಜಿಲ್ಲೆಯಿಂದ ಮರದ ತುಂಡುಗಳನ್ನು ರಹಸ್ಯವಾಗಿ ಸಂಗ್ರಹಿಸಿ, ಮರದ ಹೊಟ್ಟು ಹಾಗೂ ಪಶು ಆಹಾರದ ಚೀಲಗಳ ನಡುವೆ ಅಡಗಿಸಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  

ಈ ಕುರಿತು ಮಾತನಾಡಿದ ಡಿಸಿಎಫ್‌ ಕಿರುಬನಂತನ್‌ ಇದು ಸಂಘಟಿತ ಜಾಲದ ಕೆಲಸವಾಗಿದೆ. ಕೊಡಗಿನಿಂದ ಮರಗಳನ್ನು ಸಂಗ್ರಹಿಸಿ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಿಗೆ ಸಾಗಿಸಲಾಗುತ್ತಿತ್ತು. ಪ್ರಕರಣದ ಪ್ರಮುಖ ಆರೋಪಿಗಳು ಹಾಗೂ ಜಾಲದ ಮಾಸ್ಟರ್ ಮೈಂಡ್ ಪತ್ತೆಗೆ ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅರಣ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಮಲಪುರಂ ನ ಆರೋಪಿ ಕೇರಳ ನೋಂದಣಿ ಸಂಖ್ಯೆಯ ಲಾರಿಯನ್ನು ರಾಜ್ಯದ ಎಲ್ಲೆಡೆ ಅಧಿಕಾರಿಗಳು ತಪಾಸಣೆ ನಡೆಸುವ ಭೀತಿಯಿಂದ ರಾಜ್ಯದಲ್ಲೇ ಲಾರಿಯನ್ನು ಖರೀದಿಸಿದ್ದ. ಮರಗಳನ್ನು ಕಳ್ಳಸಾಗಾಟ ಮಾಡುವ ಉದ್ದೇಶದಿಂದಲೇ ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕರ್ನಾಟಕ ನೋಂದಣಿಯ ಲಾರಿಯನ್ನು ಖರೀದಿಸಿದ್ದ ಎನ್ನಲಾಗಿದೆ.

 ಹೆಚ್‌ ಡಿ ಕೋಟೆ ಪೆಟ್ರೋಲ್‌ ಬಂಕ್‌ ಬಳಿಗೆ ಲಾರಿಯನ್ನು ಕೊಂಡೊಯ್ಯಲಾಗುತಿತ್ತು. ಅಲ್ಲಿಂದ ಬೇರೆ ಚಾಲಕ ಲಾರಿಯನ್ನು ಬೆಂಗಳೂರು, ಹಾಗೂ ಕೇರಳದ ಇತರ ಭಾಗಗಳಿಗೆ ಕೊಂಡೊಯ್ಯುತಿದ್ದ. ಕಳೆದ ಎರಡು ತಿಂಗಳಿನಲ್ಲಿ ಸುಮಾರು 5 ಲಾರಿ ಲೋಡ್‌ ನಷ್ಟು ಮರ ಕಳ್ಳತನ ಮಾಡಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಪ್ರಕರಣವು ದೊಡ್ಡ ಜಾಲವಾಗಿದ್ದು ಇನ್ನೂ ಅನೇಕ ಆರೋಪಿಗಳಿದ್ದು ಎಲ್ಲರ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಡಿಸಿಎಫ್‌ ತಿಳಿಸಿದರು.