ಸ್ವಸ್ಥ ಸಂಸ್ಥೆಯಲ್ಲಿ ವಿಶೇಷ ಚೇತನರು, ಆರೈಕೆದಾರರಿಗೆ ನೇತ್ರ ತಪಾಸಣಾ ಉಚಿತ ಶಿಬಿರ

Jan 20, 2026 - 14:56
 0  310
ಸ್ವಸ್ಥ ಸಂಸ್ಥೆಯಲ್ಲಿ ವಿಶೇಷ ಚೇತನರು, ಆರೈಕೆದಾರರಿಗೆ   ನೇತ್ರ ತಪಾಸಣಾ ಉಚಿತ ಶಿಬಿರ

ಮಡಿಕೇರಿ ಜ.20 - ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಯೋಜನೆ ಮತ್ತು ಬೆಂಗಳೂರಿನ ಶ್ರೀ ಕೇಶವ ಟ್ರಸ್ಟ್ ಸಹಯೋಗದೊಂದಿಗೆ ವಿಶೇಷಚೇತನರು ಮತ್ತು ಅವರ ಆರೈಕೆದಾರರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ - ಕೊಡಗು ವಿಭಾಗದ ಅಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ಶಿಬಿರದಲ್ಲಿ ಪಾಲ್ಗೊಂಡು, ಕಾಯಿಲೆಗಳನ್ನು ಮುಂಚಿತವಾಗಿ ನಿರ್ಣಯ ಮಾಡುವುದರ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರಲ್ಲದೇ, ಈ ಶಿಬಿರವು ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿ ಮುಂದಿನ ಚಿಕಿತ್ಸೆಯ ಸಿದ್ಧತೆಗೆ ಉತ್ತಮ ಅವಕಾಶ ಎಂದು ಹೇಳಿದರು.

 ಬೆಂಗಳೂರಿನ ಶ್ರೀ ಕೇಶವ ಟ್ರಸ್ಟ್, ಪ್ರಭಾ ಕಣ್ಣಿನ ಚಿಕಿತ್ಸಾಲಯ, ವಿಠ್ಠಲ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ನೇತ್ರತಜ್ಞ ಡಾ. ಪ್ರವೀಣ್ ಆರ್. ಮೂರ್ತಿ ಮಾತನಾಡಿ, ದೃಷ್ಟಿ ಸಮಸ್ಯೆಗಳಿಗೆ ಇರುವ ಥೆರಪಿಗಳ ಬಗ್ಗೆ ವಿವರಿಸಿ, ಚಿಕಿತ್ಸೆ ಮತ್ತು ಥೆರಪಿಗಳ ವಿಧಾನಗಳು ಮತ್ತು ರೋಗಿಗಳ ಪಾಲಕರಿಗೆ ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಆಪ್ಟೋಮೆಟ್ರಿ ಕಾಲೇಜಿನ ವಿಭಾಗ ಮುಖ್ಯಸ್ಥ ಪ್ರೊ. ದಿವಾಕರ್ ಅವರು ನೇತ್ರ ರೋಗನಿರ್ಣಯ ಮಾಡುವ ಸೌಲಭ್ಯದ ಕುರಿತು ಮಾಹಿತಿ ಒದಗಿಸಿದರು.

 ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ದ ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚೆಂಗಪ್ಪ , ಸ್ವಸ್ಥ ಪಾಲಿಬೆಟ್ಟ ಕೇಂದ್ರದ ಮುಖ್ಯಸ್ಥೆ ಐಶ್ವರ್ಯ ಬೋಪಯ್ಯ ಉಪಸ್ಥಿತರಿದ್ದರು. ಬೆಂಗಳೂರಿನ ವಿಠ್ಠಲ ಕಣ್ಣಿನ ಆಸ್ಪತ್ರೆಯ ಗ್ಲುಕೋಮಾ ಸೇವೆಗಳ ಮುಖ್ಯಸ್ಥೆ ಡಾ. ಗೌರಿ ಜೆ. ಮೂರ್ತಿ, ಡಾ. ರಾಧಿಕಾ, ಆಪ್ಟೋಮೆಟ್ರಿಸ್ಟ್ ಪ್ರಜ್ಞಾ ಮತ್ತು ಸಹಾನ ಇವರ ತಂಡವು 180 ಫಲಾನುಭವಿಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆಯ ನಿರ್ದೇಶನವನ್ನು ನೀಡಿದರು.

ಈ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 30 ಫಲಾನುಭವಿಗಳಿಗೆ ಉಚಿತ ಕನ್ನಡಕದ ವ್ಯವಸ್ಥೆ ಮತ್ತು 5 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆಗೆ ನಿಧ೯ರಿಸಲಾಯಿತು. ಸ್ವಸ್ಥ ಸಂಸ್ಥೆಯ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಸಿಬ್ಬಂದಿ ,ವಿಶೇಷ ಶಿಕ್ಷಕರು ಶಿಬಿರವನ್ನು ನಿರ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0