ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ

Aug 14, 2026 - 00:03
 0  77
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪೊನ್ನಂಪೇಟೆ, ಆ.13: ಕಾಡಿನ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಕಾಡಂತಾರ ಫೌಂಡೇಶನ್ ಹಾಗೂ ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್ (TTF) ಸಹಯೋಗದಲ್ಲಿ ಬುಧವಾರದಂದು ಅರಣ್ಯ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

 ಶಿಬಿರಕ್ಕೆ ಕಾಲೇಜಿನ ಡೀನ್ ಡಾ. ದೇವಗಿರಿ ಚಾಲನೆ ನೀಡಿದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 70ರಿಂದ 80 ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಿಮೋಗ್ಲೋಬಿನ್ ಹಾಗೂ ರಕ್ತದ ಗುಂಪು ಪರೀಕ್ಷೆಗಳನ್ನು ನಡೆಸಲಾಯಿತು. ವೈದ್ಯಕೀಯ ಸಲಹೆ ಹಾಗೂ ಅಗತ್ಯ ಮಾರ್ಗದರ್ಶನವನ್ನು ಉಚಿತವಾಗಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ವಿಶೇಷ ಜಾಗೃತಿ ಅಧಿವೇಶನ ನಡೆಯಿತು. ಹಾವುಗಳ ಕುರಿತು ಅರಿವು, ಮಿಥ್ಯೆಗಳು ಮತ್ತು ವಾಸ್ತವಾಂಶಗಳು, ಹಾವು ಕಡಿತದಿಂದ ಮುನ್ನೆಚ್ಚರಿಕೆ ವಹಿಸುವ ವಿಧಾನಗಳು, ಪ್ರಥಮ ಚಿಕಿತ್ಸೆ ಹಾಗೂ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

 ಕಾರ್ಯಕ್ರಮವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಕೆ. ಸುಬ್ರಮಣಿ ಹಾಗೂ ಸಹಾಯಕ ಕಾರ್ಯಕ್ರಮಾಧಿಕಾರಿ ಡಾ. ಈಶ್ವರ ಅವರು ಸಂಯೋಜಿಸಿದರು. ‘ಇಂದಿನ ಮುನ್ನೆಚ್ಚರಿಕೆ, ಶಾಶ್ವತ ರಕ್ಷಣೆ’ ಎಂಬ ಆಶಯದೊಂದಿಗೆ ನಡೆದ ಶಿಬಿರವು ಯಶಸ್ವಿಯಾಗಿ ನೆರವೇರಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0