ಸ್ನೇಹ ಸಮ್ಮಿಲನದಲ್ಲಿ ಒಟ್ಟುಗೂಡಿದ 23 ವರ್ಷದ ಹಿಂದಿನ ಗೆಳೆಯರು ; ಕನ್ನಡ ಶಾಲೆ ಉಳಿಸಲು ಪಣ ತೊಟ್ಟ ಮೂರ್ನಾಡು ಸರ್ಕಾರಿ ಶಾಲೆಯ ಸಹಪಾಠಿಗಳು
ಸಿದ್ದಾಪುರ: ಕಾಲ ಚಕ್ರಗಳು ಉರುಳಿದರೂ ಶಾಲಾ ದಿನಗಳ ಗೆಳೆತನದ ನೆನಪುಗಳು ಎಂದಿಗೂ ಮಾಸುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು ಇತ್ತೀಚೆಗೆ ನಡೆದ ಮೂರ್ನಾಡು ಪ್ರೌಢಶಾಲೆಯ 2002-03ನೇ ಸಾಲಿನ 10ನೇ ತರಗತಿಯ ಸಹಪಾಠಿಗಳ ಅದ್ದೂರಿ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಏಪ್ರಿಲ್ 5ರಂದು ಕಡಗಡಾಳುವಿನ ಖಾಸಗಿ ಹೋಂ ಸ್ಟೇನಲ್ಲಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಮಾರು 41 ಮಂದಿ ಹಳೆಯ ಸಹಪಾಠಿಗಳು ತಮ್ಮ ದೈನಂದಿನ ಜಂಜಾಟಗಳನ್ನು ಬದಿಗಿಟ್ಟು, ಹಳೆಯ ಹುಮ್ಮಸ್ಸಿನೊಂದಿಗೆ ಒಂದೆಡೆ ಸೇರಿದ್ದು ವಿಶೇಷವಾಗಿತ್ತು. ಪರಿಸರ ಪ್ರೇಮದ ಸಂಕೇತವಾಗಿ ಕಲ್ಪವೃಕ್ಷಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸಹಪಾಠಗಳಿಂದ ಮರಣ ಹೊಂದಿದ ಮಿತ್ರರನ್ನು ನೆನಯುತ್ತಾ ಶ್ರದ್ದಾಂಜಲಿ ಸಮರ್ಪಸಿ ಕಾರ್ಯಕ್ರಮ ಮುಂದುವರೆಸಲಾಯಿತು. ಎರಡು ದಶಕಗಳ ಹಿಂದಿನ ಶಾಲಾ ದಿನಗಳ ತುಂಟಾಟ, ಗೆಳೆತನ ಹಾಗೂ ಗುರುಗಳ ಮಾರ್ಗದರ್ಶನವನ್ನು ಎಲ್ಲರೂ ಭಾವುಕರಾಗಿ ನೆನಪಿಸಿ ಕೊಂಡರು.
ಸಹಪಾಠಿಗಳು ನಡೆಸಿ ಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಲ್ಲಿ ನಗು ಮತ್ತು ಸಂಭ್ರಮವನ್ನು ತುಂಬಿತು. ಕೇವಲ ಹರಟೆ, ಊಟಕ್ಕೆ ಸೀಮಿತವಾಗದ ಈ ಸಮ್ಮಿಲನದಲ್ಲಿ ಕೆಲವು ಮಹತ್ವದ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸುವುದು, ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಗೌರವಿಸುವ ಗುರು ವಂದನಾ ಕಾರ್ಯಕ್ರಮ, ಎಸ್.ಎಲ್.ಸಿ ಮತ್ತು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿ ಬದುಕಿನ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾರ್ಗದರ್ಶನ ಶಿಬಿರಗಳ ಆಯೋಜನೆ ಮುಂತಾದ ಮಹತ್ತರ ಯೋಜನೆಗಳ ಕುರಿತು ಸಮ್ಮಿಲನದಲ್ಲಿ ಚರ್ಚಿಸಲಾಯಿತು.
23 ವರ್ಷದ ಹಿಂದಿನ ಸಹಪಾಠಿಗಳನ್ನು ಒಂದೆಡೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರಮ್ಯ, ಅನೀಶ್, ಅಶ್ವಥ್, ಕಿರಣ, ಶಬೀನ ಮತ್ತು ಭವ್ಯರವರನ್ನು ಕಾರ್ಯಕ್ರಮದಲ್ಲಿ ಎಲ್ಲರೂ ಕೊಂಡಾಡಿದರು. ಶಾಲಾ ದಿನಗಳ ಅದೇ ಉತ್ಸಾಹದೊಂದಿಗೆ ಎಲ್ಲರೂ ಒಂದಾಗಿ ಸಂಭ್ರಮದಲ್ಲಿ ಭಾಗವಹಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕೆಲಸಗಳನ್ನು ಮಾಡುವ ಸಂಕಲ್ಪದೊಂದಿಗೆ ಸಮ್ಮಿಲನವು ಯಶಸ್ವಿಯಾಗಿ ಮುಕ್ತಾಯಗೊಳಿಸಿತು.