ಜೂಜಿನ ಗೀಳು; ಚಿನ್ನ ರಿಪೇರಿ ಹೆಸರಿನಲ್ಲಿ ವಂಚನೆ | ತಂದೆ–ಮಗ ಪರಾರಿ, ಮಗನ ಬಂಧನ

Dec 3, 2025 - 16:51
 0  504
ಜೂಜಿನ ಗೀಳು; ಚಿನ್ನ ರಿಪೇರಿ ಹೆಸರಿನಲ್ಲಿ ವಂಚನೆ | ತಂದೆ–ಮಗ ಪರಾರಿ, ಮಗನ ಬಂಧನ
Photo credit:Etv Bharath

ಬೆಂಗಳೂರು: ಕೆಂಗೇರಿ ಉಪನಗರದಲ್ಲಿ ಚಿನ್ನ ರಿಪೇರಿ ಅಂಗಡಿ ನಡೆಸುತ್ತಿದ್ದ ತಂದೆ–ಮಗ, ಗ್ರಾಹಕರ ನಂಬಿಕೆ ದುರ್ಬಳಕೆ ಮಾಡಿಕೊಂಡು ಚಿನ್ನಾಭರಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪವನ್ ಕುಮಾರ್ ಎಂಬುವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನ ತಂದೆ ಮುನಿರಾಜು ಪರಾರಿಯಾಗಿದ್ದು, ಶೋಧ ಮುಂದುವರಿಯುತ್ತಿದೆ.

2019ರಿಂದ ಚಿನ್ನಾಭರಣಗಳ ರಿಪೇರಿ ಮತ್ತು ಹೊಳಪಿನ ಕೆಲಸ ಮಾಡುವ ಮೂಲಕ ಸ್ಥಳೀಯರ ವಿಶ್ವಾಸ ಗಳಿಸಿದ್ದ ಆರೋಪಿಗಳು, ಇತ್ತೀಚಿನ ದಿನಗಳಲ್ಲಿ ಮಟ್ಕಾ ಸೇರಿದಂತೆ ವಿವಿಧ ಜೂಜಾಟಗಳಲ್ಲಿ ಹಣ ಕಳೆದುಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸುವ ಅಸಹಾಯಕ ಪರಿಸ್ಥಿತಿಯಲ್ಲಿ ರಿಪೇರಿಗೆ ಬಂದ ಗ್ರಾಹಕರ ಚಿನ್ನವನ್ನು ಹಿಂದಿರುಗಿಸದೇ ವಂಚನೆ ನಡೆಸಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಐದು–ಆರು ತಿಂಗಳಿಂದ ಗ್ರಾಹಕರಿಗೆ ಬಹುತೇಕ ಸಮಯ ಕಾರಣ ಕೊಡುತ್ತಾ ಚಿನ್ನ ವಿಳಂಬ ಮಾಡುತ್ತಿದ್ದ ಆರೋಪಿಗಳು, ಕೊನೆಗೆ ಹಲವು ಜನರಿಂದ ಪಡೆದಿದ್ದ ಚಿನ್ನಾಭರಣಗಳನ್ನು ಒಟ್ಟುಗೂಡಿಸಿ ಅಂಗಡಿಯನ್ನು ಬಂದ್ ಮಾಡಿ ಪರಾರಿಯಾಗಿದ್ದರು. ವಂಚನೆಗೊಳಗಾದ ಗ್ರಾಹಕರು ನಂತರ ಕೆಂಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಪವನ್ ಬಂಧನದ ನಂತರ ನಡೆದ ತನಿಖೆಯಲ್ಲಿ, ಮುನಿರಾಜು ಎರಡು ತಿಂಗಳ ಹಿಂದೆ ತಿರುಪತಿಯಲ್ಲಿ ಹೊಸ ಚಿನ್ನ ರಿಪೇರಿ ಅಂಗಡಿ ತೆರೆದಿದ್ದು, ಬೆಂಗಳೂರಿನಿಂದ ವಂಚಿಸಿದ ಚಿನ್ನವನ್ನು ಆ ಅಂಗಡಿಯ ಮೂಲಕ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ತಂದೆಯ ಈ ಕೃತ್ಯದ ಬಗ್ಗೆ ಪವನ್‌ಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ 20ಕ್ಕೂ ಹೆಚ್ಚು ಜನರು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿದ್ದು, ಬಂಧಿತನಿಂದ ಹೆಚ್ಚಿನ ಮಾಹಿತಿ ಕಲೆಹಾಕುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0