ಈಡಿ ಅಧಿಕಾರಿಗಳ ಸೋಗಿನಲ್ಲಿ ಗ್ಯಾಂಗ್ ದಾಳಿ | 3.2 ಕೋಟಿ ರೂ. ಚಿನ್ನಾಭರಣ ಲೂಟಿ

Nov 24, 2025 - 20:15
 0  484
ಈಡಿ ಅಧಿಕಾರಿಗಳ ಸೋಗಿನಲ್ಲಿ ಗ್ಯಾಂಗ್ ದಾಳಿ | 3.2 ಕೋಟಿ ರೂ. ಚಿನ್ನಾಭರಣ ಲೂಟಿ
Photo credit: Etv bharath

ಹುಬ್ಬಳ್ಳಿ, ನ. 24: ನಗರ ಹೃದಯಭಾಗದಲ್ಲೇ ಈಡಿ ಅಧಿಕಾರಿಗಳ ಸೋಗಿನಲ್ಲಿ ಗ್ಯಾಂಗ್ ದಾಳಿ ನಡೆಸಿ, ಕೇರಳ ಮೂಲದ ಆಭರಣ ಪೂರೈಕೆ ವ್ಯಾಪಾರಿಯಿಂದ ಸುಮಾರು 3.2 ಕೋಟಿ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ಕಳೆದ ಗುರುವಾರ ರಾತ್ರಿ ಈ ದರೋಡೆ ನಡೆದಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ನ.15ರಂದು ಬೆಳಗಾವಿಗೆ ಆಗಮಿಸಿದ್ದ ಸುದೀನ್ ಎಂ.ಆರ್, ಕೆಲಸಗಾರ ವಿವೇಕ್ ಜೊತೆ ಚೈನ್, ಬಳೆ, ಉಂಗುರ, ಕಿವಿಯೋಲೆ, ನೆಕ್ಲೆಸ್ ಸೇರಿದಂತೆ ಆಭರಣ ಮಳಿಗೆಗಳಿಗೆ ಪೂರೈಸುವ ಚಿನ್ನಾಭರಣ ತರಲಾಗಿತ್ತು. ಆರ್ಡರ್‌ಗಳನ್ನು ಪಡೆದು ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ಧಾರವಾಡದಿಂದ ಹೋಟೆಲ್‌ ಗೆ ವಾಪಸ್ಸಾಗುತ್ತಿದ್ದ ವೇಳೆ, ಹಿಂದಿಯಲ್ಲಿ ಮಾತನಾಡಿದ ಐವರ ಗ್ಯಾಂಗ್ ವಾಹನ ತಡೆದು “ನಾವು ಈಡಿ ಅಧಿಕಾರಿಗಳು, ವಿಚಾರಣೆಗೆ ಬನ್ನಿ” ಎಂದು ಗುರುತಿನ ಚೀಟಿ ತೋರಿಸಿ ಕರೆದುಕೊಂಡು ಹೋಗಿದೆ. ಆಭರಣಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದೀರಿ ಎಂದು ಹೆದರಿಸಿ, ಮೊಬೈಲ್ ಸಿಮ್ ತೆಗೆದು, ಹಲ್ಲೆ ನಡೆಸಿ ಬ್ಯಾಗ್‌ ನಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಿತ್ತುಕೊಂಡಿದ್ದಾರೆ.

ಕೆಲಸಗಾರ ವಿವೇಕ್‌ ರನ್ನು ಕಿತ್ತೂರು ಸಮೀಪ ಇಳಿಸಿಬಿಟ್ಟು, ಸುದೀನ್‌ ರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆ ಬಳಿಯಲ್ಲಿ ಬಿಟ್ಟು ಗ್ಯಾಂಗ್ ಪರಾರಿಯಾಗಿದೆ. ಘಟನೆ ತಡವಾಗಿ ಬಹಿರಂಗವಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಸಿಸಿಬಿಗೆ ವರ್ಗಾಯಿಸಲಾಗಿದೆ.

ಹುಬ್ಬಳ್ಳಿ–ಧಾರವಾಡ ನಗರ ಡಿಸಿಪಿ ಮಹಾನಿಂಗ್ ನಂದಗಾವಿ ಹೇಳುವಂತೆ, ನ.19ರಂದು ಘಟನೆ ನಡೆದಿದ್ದು, ನ.22ರಂದು ದೂರು ದಾಖಲಾಗಿದೆ. ವಿಚಾರಣೆ ಹೆಸರಿನಲ್ಲಿ ಕರೆದುಕೊಂಡು ಹೋಗಿ ವಂಚನೆ ಮಾಡಿರುವ ಮಾಹಿತಿ ದೊರೆತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಉಪನಗರ ಠಾಣೆ ಹಾಗೂ ಸಿಸಿಬಿ ಜಂಟಿಯಾಗಿ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ನಕಲಿ ಅಧಿಕಾರಿಗಳ ಸೋಗಿನಲ್ಲಿನ ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿಸಿಟಿವಿ ದೃಶ್ಯ, ವಾಹನ ಮಾಹಿತಿ ಮತ್ತು ತಾಂತ್ರಿಕ ಸುಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿಗಳು, ವಿಶೇಷವಾಗಿ ಆಭರಣ ಪೂರೈಕೆದಾರರು, ಎಚ್ಚರಿಕೆ ವಹಿಸಲು ಮನವಿ ಮಾಡಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0