ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ₹1.5 ಕೋಟಿ ದರೋಡೆ ಮಾಡಿದ ಗ್ಯಾಂಗ್ ಬಲೆಗೆ |15 ನಿಮಿಷಗಳಲ್ಲಿ ನಗದು ದೋಚಿ ಪರಾರಿಯಾಗಿದ್ದ ಆರು ಮಂದಿ ಬಂಧನ; ಕಾರಿನ ಮಾಜಿ ಚಾಲಕನೇ ಸೂತ್ರಧಾರಿ

ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ₹1.5 ಕೋಟಿ ದರೋಡೆ ಮಾಡಿದ ಗ್ಯಾಂಗ್ ಬಲೆಗೆ   |15 ನಿಮಿಷಗಳಲ್ಲಿ ನಗದು ದೋಚಿ ಪರಾರಿಯಾಗಿದ್ದ ಆರು ಮಂದಿ ಬಂಧನ; ಕಾರಿನ ಮಾಜಿ ಚಾಲಕನೇ ಸೂತ್ರಧಾರಿ

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವೇಷ ತೊಟ್ಟು ಉಪನ್ಯಾಸಕರ ಮನೆಯಲ್ಲಿ ನುಗ್ಗಿ ಕೇವಲ 15 ನಿಮಿಷಗಳೊಳಗೆ ₹1.50 ಕೋಟಿ ನಗದು ದೋಚಿ ಪರಾರಿಯಾಗಿದ್ದ ಗ್ಯಾಂಗ್‌ ನ ಆರು ಮಂದಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳದ ಕೆಂಪಾಪುರದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಉತ್ತರ ಕರ್ನಾಟಕ ಮೂಲದ ಗಿರಿರಾಜ್ ಕುಮಾರ್ ಅವರ ಮನೆಯಲ್ಲಿ ಕಳೆದ ಸೆಪ್ಟೆಂಬರ್ 19ರಂದು ಈ ದರೋಡೆ ನಡೆದಿತ್ತು. ಪ್ರಕರಣದ ತನಿಖೆ ಬಳಿಕ ಶಂಕರ್, ರಾಜೇಂದ್ರ ಮನೋತ್ ಜೈನ್, ಹೇಮಂತ್ ಜೈನ್, ಶ್ರೀನಿವಾಸ ಗೌಡ, ಜಗನ್ ಮೋಹನ್, ಶ್ರೀನಿವಾಸ ಹಾಗೂ ಕಿರಣ್ ಜೈನ್ ಎಂಬ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ₹1.27 ಕೋಟಿ ನಗದು, ಜಮೀನು ಮತ್ತು ಮನೆ ದಾಖಲೆಗಳು ಹಾಗೂ ದರೋಡೆಗೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಗಿರಿರಾಜ್ ಅವರ ಕಾರಿನ ಚಾಲಕನಾಗಿದ್ದ ಶಂಕರ್, ಉಪನ್ಯಾಸಕರು ಇತ್ತೀಚೆಗೆ ಜಮೀನು ಮಾರಾಟದಿಂದ ಬಂದ ₹1.50 ಕೋಟಿ ನಗದು ಮನೆಯಲ್ಲಿ ಇಟ್ಟುಕೊಂಡಿರುವ ಮಾಹಿತಿಯನ್ನು ತಿಳಿದುಕೊಂಡಿದ್ದ. ಬಳಿಕ ಕೆಲಸ ತೊರೆದು ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದ ಆತ, ಈ ಮಾಹಿತಿ ತನ್ನ ಸಹಚರರೊಂದಿಗೆ ಹಂಚಿಕೊಂಡು ದರೋಡೆ ಯೋಜನೆ ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಸರ್ಕಾರಿ ಅಧಿಕಾರಿಗಳಂತೆ ಕಾಣಲು ನಗರದ ಮಳಿಗೆಯೊಂದರಲ್ಲಿ ಸೂಟು-ಬೂಟು ಖರೀದಿಸಿದ್ದರು. ಎರಡನೇ ಆರೋಪಿ ರಾಜೇಂದ್ರ ಮನೋತ್ ಜೈನ್ ತನ್ನ ಸ್ನೇಹಿತನಿಂದ ಇನೋವಾ ಕಾರು ಪಡೆದು ನಕಲಿ ನೋಂದಣಿ ಸಂಖ್ಯೆ ಅಳವಡಿಸಿದ್ದ.

 ಸೆಪ್ಟೆಂಬರ್ 19ರ ಬೆಳಿಗ್ಗೆ ಎಂಟು ಮಂದಿ ಆರೋಪಿಗಳು ಎರಡು ತಂಡಗಳಲ್ಲಿ ಯಲಹಂಕದ ಮನೆಯನ್ನು ತಲುಪಿದ್ದರು. ನಾಲ್ವರು ಒಳಗೆ ನುಗ್ಗಿ “ಹಣದ ಅವ್ಯವಹಾರ ತನಿಖೆಗಾಗಿ ಶೋಧ ನಡೆಸಬೇಕಿದೆ” ಎಂದು ಹೇಳಿ ಉಪನ್ಯಾಸಕರ ಪತ್ನಿ ಹಾಗೂ ಪೋಷಕರನ್ನು ಬೆದರಿಸಿ ಮನೆಯ ಸಜ್ಜೆ ಮೇಲೆ ಇಟ್ಟಿದ್ದ ಮೂರು ಬ್ಯಾಗ್‌ಗಳಲ್ಲಿ ₹1.50 ಕೋಟಿ ನಗದು ಹಾಗೂ ದಾಖಲೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.

 ದೃಶ್ಯಗಳಲ್ಲಿ ಆರೋಪಿಗಳ ಚಲನವಲನಗಳು ಸೆರೆಯಾಗಿದ್ದು, ತಾಂತ್ರಿಕ ತನಿಖೆಯ ಆಧಾರದ ಮೇಲೆ ಪೊಲೀಸರು ವಿಜಯನಗರ, ಸಂಜಯ್ ನಗರ, ದೊಮ್ಮಲೂರು ಹಾಗೂ ರಾಮಮೂರ್ತಿನಗರ ಪ್ರದೇಶಗಳಲ್ಲಿ ಆರೋಪಿಗಳು ಸಂಚರಿಸಿರುವುದನ್ನು ಪತ್ತೆಹಚ್ಚಿದರು. ನಂತರ ಆಂಧ್ರಪ್ರದೇಶದ ಮದನಪಲ್ಲಿ ಬಳಿ ಕಾರು ಸಮೇತ ಕೆಲ ಆರೋಪಿಗಳನ್ನು ಬಂಧಿಸಿದ್ದು, ಉಳಿದವರನ್ನು ಬೆಂಗಳೂರಿನಲ್ಲಿಯೇ ವಶಕ್ಕೆ ಪಡೆಯಲಾಗಿದೆ.