ವಾಹನ ಸವಾರರಿಗೆ ಮತ್ತೆ ಸಿಹಿ ಸುದ್ದಿ: ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ

Nov 20, 2025 - 20:12
 0  840
ವಾಹನ ಸವಾರರಿಗೆ ಮತ್ತೆ ಸಿಹಿ ಸುದ್ದಿ: ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ

ಬೆಂಗಳೂರು, ನ. 20: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡದ ಮೇಲಿನ ಶೇ.50ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಘೋಷಿಸಿದೆ. ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಮಂಗಳವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ರಿಯಾಯಿತಿ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಜಾರಿಯಲ್ಲಿರಲಿದೆ.

ಸಾರಿಗೆ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರ, ಬಾಕಿ ದಂಡ ವಸೂಲಾತಿ ಸುಗಮವಾಗಲು ಹಾಗೂ ಹೆಚ್ಚಿನ ವಾಹನ ಸವಾರರು ದಂಡ ಪಾವತಿಸಲು ಮುಂದೆ ಬರಲು ಈ ಸೌಲಭ್ಯ ನೀಡಿದೆ. ಕಳೆದ ಬಾರಿ ಇದೇ ರೀತಿ ರಿಯಾಯಿತಿ ಘೋಷಿಸಿದಾಗ, ವಾಹನ ಸವಾರರು ಭಾರೀ ಪ್ರತಿಕ್ರಿಯೆ ತೋರಿದ್ದು, 120 ಕೋಟಿ ರೂ. ಗಿಂತ ಹೆಚ್ಚು ಸಂಗ್ರಹವಾಗಿತ್ತು. ಇದೇ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ರಿಯಾಯಿತಿ ನೀಡಲು ತೀರ್ಮಾನಿಸಿದೆ.

ಎಲ್ಲಿ ದಂಡ ಕಟ್ಟಬಹುದು?

ಬೆಂಗಳೂರು ನಗರದಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ದಂಡ ಪಾವತಿಸಬಹುದಾಗಿದೆ. ಜಿಲ್ಲೆಗಳಲ್ಲಿ ಸಮೀಪದ ಯಾವುದೇ ಪೊಲೀಸ್ ಠಾಣೆಗೆ ತೆರಳಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದು.

ಆನ್‌ಲೈನ್ ಪಾವತಿ ವ್ಯವಸ್ಥೆಯೂ ಸಜ್ಜಾಗಿದೆ. ಕೆಎಸ್‌ಪಿ ಆ್ಯಪ್, ಬಿಟಿಪಿ ಅಸ್ತ್ರಂ ಪೋರ್ಟಲ್ ಮೂಲಕವೂ ದಂಡ ಪಾವತಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಬಾಕಿ ದಂಡ ಇರುವಂತೆಯೇ, ವಾಹನ ಸವಾರರಿಗೆ ಪ್ರಕರಣ ನಿವಾರಣೆಗೂ ಹಾಗೂ ಇಲಾಖೆಗೆ ವಸೂಲಿ ಸುಗಮವಾಗುವುದಕ್ಕೂ ಈ ರಿಯಾಯಿತಿ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 2
Funny Funny 0
Angry Angry 0
Sad Sad 0
Wow Wow 0